ಐತಿಹಾಸಿಕ ಆಧಾರ ಸಹಿತವಾದ ವೀರಶೈವ ಸನಾತನ ಧರ್ಮ

 ಐತಿಹಾಸಿಕ ಆಧಾರ ಸಹಿತವಾದ ವೀರಶೈವ ಸನಾತನ ಧರ್ಮ

ವೀರಶೈವಧರ್ಮದ ಪ್ರಾಚೀನತೆಯನ್ನು ಐತಿಹಾಸಿಕ ಆಧಾರಗಳಿಂದ ಕೂಡ ಅರಿಯಬಹುದಾಗಿದೆ. ಭಾರತದ ಅತ್ಯಂತ ಪ್ರಾಚೀನ ಸಂಸ್ಕೃತಿಯೆಂದು ಪ್ರಸಿದ್ದವಾದ ಸಿಂಧುಕೊಳ್ಳದ ಸಂಸ್ಕೃತಿ ಅಥವಾ ಹರಪ್ಪಾ – ಮೊಹೆಂಜೋದಾರೋ ಸಂಸ್ಕೃತಿಯ ಉತ್ಖನನದಲ್ಲಿ ದೊರೆತ ಹಲವಾರು ಪಳೆಯುಳಿಕೆ, ರೇಖಾಚಿತ್ರಗಳ ಮೂಲಕ ಆ ಸಂಸ್ಕೃತಿಯಲ್ಲಿ ಶೈವಧರ್ಮವು ಪ್ರಧಾನವಾಗಿ ಆಚರಿಸಲ್ಪಡುತ್ತಿತ್ತು ಎಂಬ ವಿಷಯವು ತಿಳಿದು ಬರುತ್ತದೆ.

 

ಶೈವ ಹಾಗೂ ವೀರಶೈವ ಕುರುಹುಗಳಾದ ರುದ್ರಶಿವಪಶುಪತಿಗಳ ಮೂಲವು ಸಿಂಧೂಕೊಳ್ಳದ ಸಂಸ್ಕೃತಿಯಲ್ಲಿ ದೊರೆಯುತ್ತವೆ. ಯಜುರ್ವೇದ ಕಾಲದಲ್ಲಿ ಬೆಳೆದು ನಿಂತಿದ್ದ ರುದ್ರಶಿವ ಸಂಸ್ಕೃತಿಯಲ್ಲಿ ಶಿವನ ಪರ್ಯಾಯ ನಾಮಗಳಾದ ಪಶುಪತಿ, ಅರಣ್ಯಾನಾಪಂತಿ, ಶಂಭು, ಗಿರಿಚರ, ನೀಲಗ್ರೀವ, ಕಪರ್ದಿನ್ ಮುಂತಾದವುಗಳನ್ನು ಕಾಣಬಹುದಾಗಿದೆ. ಸಿಂಧೂ ನಾಗರೀಕತೆಯಲ್ಲಿ ದೊರೆತ ಅರ್ಧನಿಮೀಲಿತನೇತ್ರನಾಗಿ, ನಾಸಾಗ್ರದಲ್ಲಿ ದೃಷ್ಟಿಯನ್ನಿರಿಸಿ ,ಶಿರ, ಕತ್ತು, ಎದೆಗಳನ್ನು ನೇರವಾಗಿರಿಸಿಕೊಂಡು ಕುಳಿತಿರುವ ಶಿವನ ಪ್ರತಿಮೆಯು ಆತ ಯೋಗಾರೂಢನಾಗಿರುವುದು ತಿಳಿದು ಬರುತ್ತದೆ. ಅದು ಶ್ವೇತಾಶ್ವತರೋಪನಿಷತ್ತಿನಲ್ಲಿ ಹೇಳಿರುವ ಶಿವಯೋಗವಲ್ಲದೆ ಬೇರೆ ಅಲ್ಲ.

 “ತಿರುನ್ನತಂ ಸ್ಥಾಪ್ಯ ಸಮಂ ಶರೀರಂ ಹೃದೀಂದ್ರಿಯಾಣಿ ಮನಸಾ ಸನ್ನಿರುಧ್ಯ |

  ಬ್ರಹ್ಮೋಡುಪೇನ ಪ್ರತರೇತ ವಿದ್ವಾನ್ ಸ್ರೋತಾಂಸಿ ಸರ್ವಾಣಿ ಭಯಾವಹಾನಿ||”

 “ವಕ್ಷಸ್ಥಳ, ಕುತ್ತಿಗೆ, ಶಿರಸ್ಸುಗಳನ್ನು, ನೇರವಾಗಿರಿಸಿಕೊಂಡು ದೇಹವನ್ನು ರುಜುವಾಗಿ ಮಾಡಿಕೊಂಡು ಮನಸ್ಸಿನೊಡನೆ ಸರ್ವ ಇಂದ್ರೀಯಗಳನ್ನೂ ಹೃದಯದಲ್ಲಿ ನೆಲೆಗೊಳಿಸಿ  ಯೋಗಮಾರ್ಗವನ್ನು ನಿತ್ಯವೂ ಆಚರಿಸಿದರೆ ಬ್ರಹ್ಮೋಡುಪ (ಅಂದರೆ ಪ್ರಣವವೆಂಬ ದೋಣಿಯ) ಮೂಲಕ ಜನನಮರಣರೂಪಿ ಸಂಸಾರ ಸಾಗರವನ್ನು ದಾಟುವನು“. ಕಾಲದಲ್ಲಿಯೇ ದೇಹದಮೇಲೆ ಧರಿಸಬಹುದಾದ ದೊಡ್ಡ ಗಾತ್ರದ ಶಿವಲಿಂಗಗಳು ದೊರೆತಿವೆ. ಸಣ್ಣ ಗಾತ್ರದ ಲಿಂಗಗಳು ಇಂದಿನ ಶೈವರು ಧರಿಸುವಂತಹುವೇ ಆಗಿವೆ. ಸರ್ ಜಾನ್ ಮಾರ್ಷಲ್  ಹೇಳುವಂತೆ – “Indeed the only explanation applicable to them all in that they were sacred objects of some sort, the larger ones serving as aniconic agalamata for cult purpose, the smaller, as amulets to be carried on the person, just as miniature lingas are carried by Saivites today” ಅಂತೆಯೇ ಹರಪ್ಪಾ ಮೋಹೆಂಜೋದಾರೋವಿನಲ್ಲಿ ಉಬ್ಬಿದ ಹೆಗಲು ಹಾಗೂ ಉಬ್ಬದೇ ಇರುವ ಹೆಗಲುಗಳುಳ್ಳ ವೃಷಭದ ಪ್ರತಿಮೆಗಳು ಕೂಡ ಸಿಕ್ಕಿವೆ

ಟಿ.ಏನ್. ಮಲ್ಲಪ್ಪನವರು ಅನೇಕ ಆಂಗ್ಲ ವಿದ್ವಾಂಸರಹರಪ್ಪಾ ಮೊಹೆಂಜೋದಾರೋಕುರಿತಾದ ಲೇಖನಗಳನ್ನು ಉದ್ಧರಿಸಿ – “ಮೊಹೆಂಜೋದಾರೋ ಮುದ್ರಿಕೆಗಳಲ್ಲಿ ದೊರೆಯುವ ಒಂದು ರೇಖಾ ಚಿತ್ರವನ್ನು ಇಂದೂ ವೀರಶೈವರು ತಮ್ಮ ಮನೆಗಳ ಗೋಡೆಗಳ ಮೇಲೆ ಬರೆಯುತ್ತಾರೆ. ಎರೆಡು ತ್ರಿಕೋನದ ತುದಿಗಳು ಒಂದನ್ನೊಂದು ಸಂಧಿಸಿದಂತೆ ಬರೆದ ರೇಖಾ ಚಿತ್ರವಿದು. ಅದು ಆಕಾರದಲ್ಲಿ ಬುಡಬುಡಿಕೆಯಂತಾಗುತ್ತದೆ. ಇದು ಶಿವಲಿಂಗಮುದ್ರೆ, ಎರೆಡು ತ್ರಿಕೋಣಗಳಿಂದ ಕೂಡಿದ ಲಿಂಗಪೀಠವು ಶಕ್ತಿಪ್ರಸಾರದಿಂದ ತ್ರಿಗುಣಾತ್ಮಕ ಜಗತ್ತಾಗುವುದನ್ನು ಸೂಚಿಸುತ್ತದೆ. ತ್ರಿಕೋನದ ಕಲ್ಪನೆಯಲ್ಲಿ (The divine triad) ಜೀವ – ಶಿವ – ಶಕ್ತಿಯರು ಒಂದೇ ಎಂಬ ಭಾವನೆಯು ಸೂಚಿತವಾಗಿದೆ. ಇನ್ನು ಎರೆಡು ತ್ರಿಕೋನಗಳು ಏಕೆಂದರೆ ವೀರಶೈವ ಸಿದ್ಧಾಂತದಂತೆ ಸೃಷ್ಟಿಯಲ್ಲಿ ಎರೆಡು ವಿಭಾಗಗಳು ಕಂಡುಬರುವುದು. ನಿಷ್ಕಲ ಪರಶಿವ ಬ್ರಹ್ಮವು  ತತ್ವಾತೀತವಾಗಿರುವುದರಿಂದ ಈ ಎರೆಡು ತ್ರಿಕೋಣಗಳಿಂದ ಸೂಚಿತವಾಗುವ ಸೃಷ್ಟಿಯ ಎರೆಡು ವಿಭಾಗಗಳಿಗೂ ಮೀರಿದುದಾಗಿ ಶೂನ್ಯವಾಗಿಯೇ ಅರಿಯಲ್ಪಡುವುದು. ಲಿಂಗತತ್ವಗಳನ್ನು ತೋರಿಸುವುದೊಂದು ತ್ರಿಕೋನ, ಅಂಗತತ್ವಗಳ ತೋರಿಸುವುದೊಂದು ತ್ರಿಕೋನ”. ಹೀಗೆ ಶೈವ – ವೀರಶೈವ ಮೂಲಗಳು ಸಿಂಧೂ ಸಂಸ್ಕೃತಿಯಲ್ಲಿ ಚೆನ್ನಾಗಿ ಬೇರೂರಿದ್ದ ಬಗೆಯನ್ನು, ಸರ್ ಜಾನ್ ಮಾರ್ಷಲ್, ಫಾದರ್ ಹೆರಾಸ್, ಎ.ಪಿ. ಕರಮಕರ್, ಸರ್ ಮಾರ್ಟಿಮರ್, ವೀಲರ್, ಎಸ್.ವಿ. ವೆಂಕಟೇಶ್ವರ ಮುಂತಾದವರ ಸಂಶೋಧಿತ ಲೇಖನಗಳನ್ನು ಆಧರಿಸಿ, ವಿಶದವಾಗಿ ವಿವರಿಸಿದ್ದಾರೆ.

ಹೀಗೆ ಹಲವಾರು ಅಂಶಗಳನ್ನು ವಿಚಾರಿಸಲಾಗಿ ಪಶುಪತಿಯ ರೂಪದಲ್ಲಿ ರುದ್ರ-ಶಿವನು ಸಿಂಧೂ ಸಂಸ್ಕೃತಿಯಲ್ಲಿ ಆರಾಧ್ಯ ದೈವವಾಗಿದ್ದನೆಂಬುದು ತಿಳಿದು ಬರುತ್ತದೆ. ಶಿವನ ಅಥವಾ ಶಿವಯೋಗಿಣಿಯ ಯೋಗ, ಧ್ಯಾನಮುದ್ರೆಗಳಿರುವ ಹಲವಾರು ಪ್ರತಿಮೆಗಳು, ಭಿತ್ತಿಚಿತ್ರಗಳು ಲಭ್ಯವಾಗುವುದರಿಂದ ಅಂದಿನ ಕಾಲದಲ್ಲಿ ಶಿವಯೋಗವು ಪ್ರಚಲಿತದಲ್ಲಿತ್ತೆಂದು ನಿಸ್ಸಂಶಯವಾಗಿ ಹೇಳಬಹುದಾಗಿದೆ. 

ಭಾರತೀಯ ಸಾಹಿತ್ಯದ ಮಹಾಕಾವ್ಯಗಳಾದ ರಾಮಾಯಣ ಹಾಗೂ ಮಹಾಭಾರತದಲ್ಲಿ ಕೂಡ ಹಲವಾರು ಅಂಶಗಳು ವೀರಶೈವರಿಗೆ ಪೂರಕವಾಗಿ ಲಭ್ಯವಾಗುತ್ತವೆ. ಮಹಾಭಾರತದ ಅನುಶಾಸನ ಪರ್ವದ ಒಂದು ಪ್ರಸಂಗದಲ್ಲಿ ಯುಧಿಷ್ಠಿರ ಹಾಗೂ ಭೀಷ್ಮರ ಮಧ್ಯೆ ನಡೆದ ಸಂವಾದ ಇಂತಿದೆ.

ಯುಧಿಷ್ಠಿರ ಉವಾಚ – 

“ಕಿಮಾಹುರ್ಭರತ ಶ್ರೇಷ್ಠ ವಿಪ್ರಾಹ ಸನಾತನಾಃ |

 ಬ್ರಾಹ್ಮಣಾ ಲಿಂಗಿನಶ್ಚೈವ ಬ್ರಾಹ್ಮಣಾ ವಾಪ್ಯಲಿಂಗಿನಃ ||”

ಭೀಷ್ಮ ಉವಾಚ –

 ಸ್ವವೃತ್ತಿಮಭಿಪನ್ನಾಯ ಲಿಂಗಿನೇ ಚೇತರಾಯ ಚ |

 ದೇಯಮಾಹುರ್ಮಹಾರಾಜ ಉಭಾವೇತೌ ತಪಶ್ವಿನೌ ||

ಇಲ್ಲಿ ಪ್ರಥಮ ಶ್ಲೋಕದಲ್ಲಿ ‘ದಾನಕ್ಕೆ ಸತ್ಪ್ರಾಪ್ತರಾರು? ದೇಹದ ಮೇಲೆ ಲಿಂಗವನ್ನು ಧರಿಸಿದ ಬ್ರಾಹ್ಮಣರೋ ಅಥವಾ ಲಿಂಗ ಧರಿಸಿರದ ಬ್ರಾಹ್ಮಣರೋ? ಎಂದು ಯುಧಿಷ್ಠಿರನು ಭೀಷ್ಮರಿಗೆ ಕೇಳುವನು. ಇದಕ್ಕೆ ಉತ್ತರವಾಗಿ ಭೀಷ್ಮರು ಮುಂದಿನ ಶ್ಲೋಕದಲ್ಲಿ ‘ತನ್ನ ಆಚಾರಗಳಲ್ಲಿ ಶ್ರದ್ದೆಯಿಂದ ನಿರತರಾಗಿರುವ ಲಿಂಗೀಬ್ರಾಹ್ಮಣನಾಗಲಿ ಅಲಿಂಗೀಬ್ರಾಹ್ಮಣನಾಗಲಿ’ ಇಬ್ಬರೂ ಕೂಡ ದಾನಕ್ಕೆ ಅರ್ಹರಾದವರು ಏಕೆಂದರೆ ಉಭಯರೂ ಕೂಡ ಶ್ರೇಷ್ಠ ತಪಸ್ವಿಗಳೇ ಆಗಿದ್ದಾರೆ’ ಎಂದು ಹೇಳುವನು. ಇಲ್ಲಿ ‘ಬ್ರಾಹ್ಮಣ’ ಎಂಬುದು ಇಂದಿನ ಕಾಲದ ಜಾತಿವಾಚಕವಾಗಿರದೆ, ಬ್ರಹ್ಮನನ್ನು(ಪರಮಾತ್ಮನನ್ನು) ಚೆನ್ನಾಗಿ ಅರಿತವನು (ಬ್ರಹ್ಮಂ ಜಾನಾತಿ) ಎಂಬರ್ಥದಲ್ಲೇ ಹೇಳಲಾಗಿದೆ. ಮಹಾಭಾರತದ ಅಂದಿನ ಸಮಾಜದಲ್ಲಿ ಲಿಂಗಧಾರಿಗಳಾದ ಶೈವರು ಪೂಜ್ಯಸ್ಥಾನವನ್ನು ಹೊಂದಿದ್ದರೆಂದು ತಿಳಿದು ಬರುವುದು. ಅಂದು ಅವರು ಪಾಶುಪತರೆಂದು ಕರೆಯಲ್ಪಡುತ್ತಿದ್ದು, ಅದು ವೀರಶೈವರಲ್ಲದೇ ಬೇರಲ್ಲವೆಂದು ಶ್ರೀ ಸಿದ್ಧಾಂತ ಶಿಖಾಮಣಿಯ ‘ವಿದಧತು ಮತಿಮಸ್ಮಿನ್ ವೀರಶೈವಾ ವಿಶಿಷ್ಟಾಃ ಪಶುಪತಿಮತಸಾರೇ ಪಂಡಿತ ಶ್ಲಾಘನೀಯೇ’ ಎಂಬ ಉಕ್ತಿಯಿಂದ ಸ್ಪಷ್ಟವಾಗುವುದು. ‘ಪತ್ಯುರಸಾಮಂಜ್ಯಸ್ಯಾತ್’ ಎಂಬ ಬ್ರಹ್ಮಸೂತ್ರಕ್ಕೆ ಭಾಷ್ಯ ಬರೆಯುವ ಸಂದರ್ಭದಲ್ಲಿ ಶ್ರೀ ಶಂಕರಾಚಾರ್ಯರು ಪಾಶುಪತ ಮತದವರನ್ನು ಖಂಡಿಸುತ್ತಾರೆ. ಆದರೆ, ಪಾಶುಪತದವರಲ್ಲಿ ‘ವೈದಿಕ ಪಾಶುಪತ’ ಮತ್ತು ‘ಅವೈದಿಕ ಪಾಶುಪತ’ ಎಂದು ಎರೆಡು ತೆರನಾಗಿದ್ದು ಶಂಕರರು ಖಂಡಿಸಿದ್ದು ಅವೈದಿಕ ಪಾಶುಪತರನ್ನೇ ಹೊರತು ವೈದಿಕ ಪಾಶುಪತ(ವೀರಶೈವ)ರನ್ನಲ್ಲ ಎಂದು ಶ್ರೀ ಮದಪ್ಪಯ್ಯ ದೀಕ್ಷಿತರು ತಮ್ಮ ‘ಕಲ್ಪತರು’ ಎಂಬ ವ್ಯಾಖ್ಯಾನದಲ್ಲಿ ಸ್ಪಷ್ಟಪಡಿಸಿದ್ದಾರೆ.  ‘ವೀರಶೈವ ಸವೋತ್ಕರ್ಷದೀಪಿಕಾ’ ಎಂಬ ಗ್ರಂಥದಲ್ಲಿ “ಚನ್ನವೃಷಭೇಂದ್ರ” ಸ್ವಾಮಿಗಳು ಕೂಡ ವೈದಿಕ ಪಾಶುಪತರೆಂದರೆ ವೀರಶೈವರೇ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಈ ಮೇಲಿನ ಅಂಶಗಳನ್ನು ಗಮನಿಸಿದಾಗ ವೀರಶೈವವು ಮಹಾಭಾರತ ಕಾಲದಲ್ಲಿ ಪ್ರಚಲಿತದಲ್ಲಿತ್ತೆಂಬುದು ವಿದಿತವಾಗುತ್ತದೆ. ಈ ಮುಂದಿನ ಅಂಶಗಳು ಕೂಡ ವೀರಶೈವರ ಪ್ರಾಚೀನತೆಯನ್ನು ತಿಳಿಸಲು ಸಹಾಯಕವಾಗಿವೆ. ಕ್ರಿ. ಪೂ. ೩ನೇ ಶತಮಾನದಲ್ಲಿ ‘ತಿರುವಳ್ಳುರ್’ ಎಂಬ ಶಿವಶರಣರು ‘ತಿರುಕುರುಳ್’ ಎಂಬ ಗ್ರಂಥವನ್ನು ತಮಿಳು ಭಾಷೆಯಲ್ಲಿ ರಚಿಸಿದ್ದಾರೆ. ವೇಡಿವೇಲುಪಿಳ್ಳೈ ಎಂಬ ವಿದ್ವಾಂಸರು ಈ ಗ್ರಂಥಕ್ಕೆ ಭಾಷ್ಯವನ್ನು ಬರೆದಿದ್ದಾರೆ. ಈ ಭಾಷ್ಯಕಾರರು ಮೂಲಗ್ರಂಥಕರ್ತೃಗಳಾದ ತಿರುವಳ್ಳುವರ್ ವೀರಶೈವರಿದ್ದರೆಂದು ಹೇಳಿದ್ದಾರೆ. ಇದರಿಂದ ವೀರಶೈವವು ಕ್ರಿಸ್ತಪೂರ್ವದಲ್ಲೇ ಪ್ರಚಲಿತದಲ್ಲಿತ್ತೆಂದು ಸ್ಪಷ್ಟವಾಗುತ್ತದೆ. 

‘ನಕ್ಕೀರರ್’ ಎಂಬ ಪ್ರಸಿದ್ಧ ತಮಿಳು ಕವಿಗಳು ಕೂಡ ವೀರಶೈವರಿದ್ದರೆಂದು ಶ್ರೀ ವೇದಾಚಲಂ ಪಂಡಿತರು ಹೇಳುತ್ತಾರೆ. ಈ ಶಿವಶರಣರು ಕ್ರಿ.ಶ. ೧ನೇ ಶತಮಾನದಲ್ಲಿದ್ದರು. ಕ್ರಿ.ಶ.  ಮೂರನೇಯ ಶತಮಾನದಲ್ಲಿ ಮಾಣಿಕ್ಯವಾಚಕರ್ ಎಂಬ ಮಹಾಮಹಿಮಶಾಲಿಗಳು ಬರೆದಿರುವ ‘ತಿರುವಾಚಗಂ’ ಎಂಬ ಗ್ರಂಥವು ತಮಿಳುಭಾಷೆಯಲ್ಲಿ  ಬಹುಪ್ರಸಿದ್ಧಿಯನ್ನು ಹೊಂದಿದೆ. ಇವರೂ ಸಹ ವೀರಶೈವರಿದ್ದರೆಂಬುದಕ್ಕೆ ಇವರ ಗ್ರಂಥವೇ ಸಾಕ್ಷಿಯಾಗಿದೆ. ಶ್ರೀ.ಆರ್.ಎಸ್.ವೇದಾಚಲಂ ಪಂಡಿತರು ‘Tamilian Antiquary’ ಎಂಬ ಗ್ರಂಥದಲ್ಲಿ ಈ ಶಿವಶರಣರು ವೀರಶೈವರಿದ್ದರೆಂಬುದಕ್ಕೆ ಅನೇಕ ಆಧಾರಗಳಿಂದ ಧೃಢೀಕರಿಸಿದ್ದಾರೆ.

ಆದಿ ಶಂಕರಾಚಾರ್ಯರು ಯಾವ ಯಾವ ಮತದವರ ಸಂಗಡ ವಾದಿಸಿದರೆಂಬುದನ್ನೂ, ಆಯಾ ಮತದವರ ಚಿಹ್ನೆಗಳನ್ನೂ ಕುರಿತು ಆನಂದಗಿರಿಯು “ಶಂಕರ ದಿಗ್ವಿಜಯ” ಗ್ರಂಥದಲ್ಲಿ ವಿವರಿಸಿದ್ದಾನೆ. ಅದರಲ್ಲಿ ಜಂಗಮರ ಸಂಗಡ ವಾದಿಸಿದರೆಂತಲೂ, ಜಂಗಮರು ತಲೆಗೆ ಲಿಂಗವನ್ನು ಧರಿಸಿದ್ದರೆಂತಲೂ ಸ್ಪಷ್ಟವಾಗಿ ಹೇಳಿದೆ. ಭರತಖಂಡದಲ್ಲಿ ವೀರಶೈವರಿಗೆ ಜಂಗಮರೆಂದು ಹೇಳುವ ರೂಢಿಯು ಈಗಲೂ ಇದೆ.

ಹಾಗೆಯೇ ಭರತಖಂಡದಲ್ಲಿ ವೀರಶೈವರಿಗೆ “ಲಿಂಗೀಬ್ರಾಹ್ಮಣರೆಂದು” ಕರೆಯುತ್ತಾರೆ. ನೇಪಾಳ ರಾಷ್ಟ್ರದ ಕಠ್ಮಂಡುವಿನ ಹತ್ತಿರದ ಭಕ್ತಪುರದಲ್ಲಿ ಇಂದಿಗೂ ಕೂಡ ‘ಜಂಗಮ’ ಉಪಾಧಿಯುಳ್ಳ ವೀರಶೈವ ಮನೆತನಗಳಿವೆ.

ಮಿ.ಫಿಲಿಪ್. ಬ್ರೌನ್ ಸಾಹೇಬರು “ಕಾರ್ನಾಟಿಕ್ ಕ್ರೋನೊಲೊಜಿ” ಎಂಬ ಗ್ರಂಥದಲ್ಲಿ ಹೇಳಿರುವುದೇನೆಂದರೆ “ಕ್ರಿ.ಶ. ೫ನೇಯ ಶತಮಾನದಲ್ಲಿ ರಾಜ್ಯವಾಳುತ್ತಿದ್ದ ೨೧ನೇಯ ರಾಜನು ವೀರಶೈವ ಪಕ್ಷಪಾತಿಯಾಗಿದ್ದನು. ಈ ಅಂಶಗಳಿಂದ ತಿಳಿದು ಬರುವುದೇನೆಂದರೆ ೫ನೇ ಶತಮಾನದ ಹೊತ್ತಿಗೆ ವೀರಶೈವವು ಸಮಾಜದಲ್ಲಿ ಸಮರ್ಥವಾಗಿ ಬೇರೂರಿತ್ತು. 

ಮಿ.ರೈಸ್ ಸಾಹೇಬರು ತಮ್ಮ ಪುಸ್ತಕದ ೨೧೦ನೆಯ ಪುಟದಲ್ಲಿ ಬರೆದಿರುವುದೇನೆಂದರೆ “ಗಂಗವಂಶದಲ್ಲಿನ ವೀರಪ್ಪ ಎಂಬ ರಾಜನು ಕ್ರಿ.ಶ.೮೫೦ರಲ್ಲಿ ರಾಜ್ಯವಾಳುತ್ತಿದ್ದಾಗ ಆ ಕಾಲದ ಶಿಲಾಲಿಪಿಗಳಲ್ಲಿ ವೀರಶೈವ ಯೋಧರ ಗುರುತುಗಳನ್ನು ಹೊಂದಿರುವ ಚಿತ್ರಗಳಿವೆ. ಈ ಅಂಶವು ವೀರಶೈವರು ಒಂದು ವರ್ಗಕ್ಕೆ ಸೀಮಿತರಾಗದೇ ಯೋಧರಾಗಿ ಕೂಡ ರಾಷ್ಟ್ರ ರಕ್ಷಣೆಯ ಕಾಯಕದಲ್ಲಿ ತೊಡಗಿದ್ದರು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಕ್ರಿ.ಶ. ೯ನೇಯ ಶತಮಾನದಲ್ಲಿ ‘ಕಂಚಿ’ ಪಟ್ಟಣದಲ್ಲಿ ಅಕಳಂಕ ಎಂಬ ಜೈನಗುರುಗಳು ವೀರಶೈವ ಪಕ್ಷವನ್ನು ವಹಿಸಿ ಬೌದ್ಧರ ಸಂಗಡ ವಾದಿಸಿದರೆಂದು ಕ್ರಿ.ಶ. ೧೧೨೮ರಲ್ಲಿ ಬರೆದ ಶ್ರವಣಬೆಳಗೋಳದಲ್ಲಿರುವ ಶಿಲಾಲೇಖನದಿಂದ ಗೊತ್ತಾಗುತ್ತದೆ. ವೀರಶೈವರು ತಮ್ಮ ಮತಪ್ರಾಶಸ್ತ್ಯವನ್ನ ತಮ್ಮ ಗುರುಗಳಿಂದ ಕಾಪಾಡಿಕೊಂಡರೆಂಬ ಉದ್ದೇಶದಿಂದಲೇ ಈ ಪ್ರಕಾರ ಜೈನರು ಬರೆದಿರಬಹುದೆಂದು ಯೋಚಿಸಿದರೂ ಆ ಕಾಲದಲ್ಲೇ ವೀರಶೈವರಿದ್ದರೆಂದು ಸಿದ್ಧವಾಗುತ್ತದಷ್ಟೇ. 

ಮಿ.ಫ್ಲೀಟ್ ರವರು ಪೋಟಲಕೆರೆಯ ವಿಷಯವಾಗಿ ಬರೆದಿರುವುದೇನೆಂದರೆ : “ಕ್ರಿ.ಶ. ೧೦೧೬ ರಿಂದ ೧೦೪೦ನೆಯ ಇಸವಿಯವರೆಗೆ ಆಳಿದ ಚಾಲುಕ್ಯ ವಂಶದ ಮೂರನೇಯ ರಾಜನಾದ ಜಯಸಿಂಹನು ದೇವರದಾಸಿಮಯ್ಯನಿಂದ ವೀರಶೈವ ಮತದೀಕ್ಷೆಯನ್ನು ಹೊಂದಿದನು. ಚಾಲುಕ್ಯರಾಜನು ತನ್ನ ಮತವನ್ನು ತ್ಯಜಿಸಿ ದೇವರದಾಸಿಮಯ್ಯನಿಂದ ವೀರಶೈವ ಮತದೀಕ್ಷೆಯನ್ನು ಹೊಂದಬೇಕಾದರೆ ಅಂದು, ಅಂದರೆ ಬಸವಪೂರ್ವದ ವೀರಶೈವವು ತನ್ನ ತತ್ವಗಳಿಂದ ಸಮಾಜದಲ್ಲಿ ಉನ್ನತ ಪ್ರಭಾವ ಬೀರಿರುವುದು ವಿದಿತವಾಗುವುದು. 

ಎಸ್.ಎಸ್. ದಾಸಗುಪ್ತಾರವರು – The present writer is of opinion that Kernel of Veerashiva thought is almost early as Upanishads and it may be found in a more or less systematic manner by way of suggestions in the writings of Kalidasa who lived in early centuries of Christian era. ಎಂದು ವೀರಶೈವದ ಪ್ರಾಚೀನತೆಯನ್ನು ಎತ್ತಿ ತೋರಿಸಿದ್ದಾರೆ. 

ಈ ರೀತಿ ಬಸವಣ್ಣನಿಗೂ ಸಹಸ್ರಾರು ವರ್ಷಗಳ ಪೂರ್ವದಲ್ಲಿ ವೀರಶೈವ ಮತವು ತತ್ವ ಆಚರಣೆಗಳಿಂದ ಸಮೃದ್ಧಿಯಾಗಿದ್ದುದು ತಿಳಿದು ಬರುತ್ತದೆ. ಈ ಪೀಠಿಕೆಯು ಆರಂಭದಿಂದ ಇಲ್ಲಿಯವರೆಗೆ ಬಸವಪೂರ್ವದಲ್ಲಿ ವೀರಶೈವ ಧರ್ಮವು ಭರತಖಂಡದಲ್ಲಷ್ಟೇ ಅಲ್ಲದೇ ಜಾವಾ, ಸುಮಾತ್ರ, ಕಾಂಬೋಡಿಯಾ ಮುಂತಾದ ಹಲವು ರಾಷ್ಟ್ರಗಳಲ್ಲಿ ಕೂಡ ಪ್ರಚಾರದಲ್ಲಿತ್ತು ಎಂಬುದು ಹಲವಾರು ಐತಿಹಾಸಿಕ ಪ್ರಮಾಣಗಳಿಂದ ತಿಳಿದುಬರುವುದು.

ಇದೇ ವಿಷಯವಾಗಿ ‘ಬಸವ ಚರಿತ್ರೆ’ ಗ್ರಂಥದಲ್ಲಿ ಹರ್ಡೇಕರ್ ಮಂಜಪ್ಪನವರು ಹೇಳುವುದೇನೆಂದರೆ – “ಈ ಪ್ರಕಾರ ಶ್ರೀ ಬಸವಣ್ಣನವರು ಅವತರಿಸುವುದಕ್ಕಿಂತ ಪೂರ್ವದಲ್ಲಿಯೇ ಸಾವಿರಾರು ವರ್ಷಗಳಿಂದಲೂ ವೀರಶೈವ ಮಠವು ಪ್ರಚಾರದಲ್ಲಿತ್ತೆಂಬುದಕ್ಕೆ ಅನೇಕ ಆಧಾರಗಳಿದ್ದರೂ ಶ್ರೀ ಬಸವಣ್ಣನವರೇ ಈ ಮತವನ್ನು ಹೊಸದಾಗಿ ಸ್ಥಾಪಿಸಿದರೆಂದು ಅನೇಕರು ತಿಳಿದುಕೊಳ್ಳಲು ಮುಖ್ಯ ಕಾರಣವೇನೆಂದರೆ ಈ ವೀರಶೈವ ಮತವು ಜೈನ ಮತ್ತು ಶೈವಮತಗಳ ಪ್ರಾಬಲ್ಯದಿಂದ ಬಸವಣ್ಣನವರ ಪೂರ್ವದಲ್ಲಿ ಬಹು ಕ್ಷೀಣಿಸಿ ಹೋಗಿದ್ದಿತು. ಆದ್ದರಿಂದ ಕರ್ನಾಟಕದಲ್ಲಿ ವಿರಳವಾಗಿದ್ದ ಈ ಮತವು ಶ್ರೀ ಬಸವಣ್ಣನಿಂದಲೇ ಈ ದೇಶದಲ್ಲಿ ಪ್ರಚಲವಾಗಿ ವ್ಯಾಪಿಸಲು, ಇವರೇ ಮತವನ್ನು ಉಂಟು ಮಾಡಿದರೆಂದು ತಿಳಿದುಕೊಂಡರು. ವೀರಶೈವ ಮತವೇನೋ ಶ್ರೀ ಬಸವಣ್ಣನವರ ಪೂರ್ವದಲ್ಲಿಯೂ ಇದ್ದಿತು. ಆದರೆ ಅಂತ್ಯಜಾತಿಯಾಗಿ ಎಲ್ಲರಿಗೂ ಲಿಂಗಧಾರಣೆ ಮಾಡಿ ಅವರ ಪೂರ್ವಜಾತಿಯನ್ನೇ ಮರೆತು ಬಳಕೆಯಲ್ಲಿಟ್ಟುಕೊಳ್ಳುವಂತಹ ಮತ್ತು ಜನ್ಮಕ್ಕೆ ಪ್ರಾಧಾನ್ಯವಿಲ್ಲದೇ ಶೀಲಾಚಾರಗಳಿಗೇನೇ ಪ್ರಾಮುಖ್ಯತೆಯನ್ನು ಕೊಟ್ಟು ವರ್ಣಗಳನ್ನೇ ತೆಗೆದುಹಾಕಿ ಸ್ತ್ರೀಯರಿಗೂ ಪುರುಷರಂತೆಯೇ ಧಾರ್ಮಿಕ ಸ್ವಾತಂತ್ರ್ಯವನ್ನುಂಟು ಮಾಡಿದಂತಹ ಬಸವಣ್ಣನವರ ವೀರಶೈವ ಮತವೇ ಪೂರ್ವದಲ್ಲಿಯೂ ಇದ್ದೀತೇ? ಎಂದು ಅನೇಕರು ಪ್ರಶ್ನೆ ಮಾಡುವುದುಂಟು. ಏಕೆಂದರೆ ಇವೆಲ್ಲವೂ ಅವೈದಿಕ ರೀತಿಗಳೆಂತಲೂ ಬಸವಣ್ಣನವರೇ ಇವುಗಳನ್ನು ವೀರಶೈವ ಮತದಲ್ಲಿ ಹೊಸದಾಗಿ ಸೇರಿಸಿದರೆಂತಲೂ ಅವರು ತಿಳಿಸಿದ್ದಾರೆ. ಇದು ಯುಕ್ತವಲ್ಲ” ಎಂದು ಹೇಳಿರುವರು.

ಮೂಲತಃ ವೀರಶೈವ ಮತವು ವರ್ಣ, ಲಿಂಗ, ಜಾತಿ ಭೇಧವಿಲ್ಲದೇ ಲಿಂಗಧಾರಿಗಳಾದ ಎಲ್ಲರೂ ಸಮಾನರು ಎನ್ನುವ ತತ್ವವನ್ನು ಉಪದೇಶಿಸುತ್ತದೆ. ಹಲವಾರು ಶೈವಾಗಮಗಳಲ್ಲಿ ಈ ವಿಷಯವು ಸ್ಪಷ್ಟವಾಗಿ ಹೇಳಲ್ಪಟ್ಟಿದೆ. ಅವುಗಳಲ್ಲಿ ಕೆಲವನ್ನು ಉದಾಹರಿಸಬಹುದಾಗಿದೆ.

  “ಬ್ರಾಹ್ಮಣಾ ಕ್ಷತ್ರೀಯಾ  ವೈಶ್ಯಾಃ ಶೂದ್ರಾ ಯೇ ಚಾನ್ಯಜಾತಯಃ |

  ಲಿಂಗಧಾರಣಮಾತ್ರೇಣ ಶಿವ ಏವ ನ ಸಂಶಯಃ ||

  ಸ್ತ್ರೀಯೋಬಾಲಾಸ್ತಥಾವೃದ್ಧಾ ಖಂಜಾಃ ಕುಬ್ಜಾಂಧಪಂಗವಃ |

 ಉನ್ಮತ್ತಾ ಬಧೀರಾಃ ಕಾಣಾಃ ಶಠಾ ಧೂರ್ತಾಶ್ಚ ವಂಚಕಾಃ ||

  ಚೋರಾ ಜಾರಾಸ್ತಥಾ ವೇಶ್ಯಾ ಆಚಾಂಡಾಲಾಂತಸಂಭವಾಃ |

  ಮಲ್ಲಿಂಗಧಾರಣಾದೇವ ಮದ್ರೂಪಾ ಏವ ತೇ ಶಿವೆ ||

  ನ ಬಾಲವೃದ್ಧಭೇದೋಸ್ತಿ ನಮಸ್ಕಾರಾದಿ ಪೂಜನೇ |

  ಸರ್ವೇಪಿ ವಂದನೀಯಾ ಹಿ ವಿಧವಾಪುಷ್ಪಿಣೀಮುಖಾಃ ||

  ಯಸ್ಯಾಸ್ತಿ ಭಕ್ತಿರೀಶಾನೀ ವೀರಶೈವ ಮತಾಶ್ರಯೇ |

  ಭಕ್ತಿಮಾತ್ರಪವಿತ್ರಾ ಹಿ ಸರ್ವ ಏವಾಧಿಕಾರಿಣಃ ||

“ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ, ಸ್ತ್ರೀ, ಬಾಲಕ, ವೃದ್ಧ, ಕುಳ್ಳರು, ಕುರುಡರು, ಕುಂಟರು, ಕಿವುಡರು, ಜಾರರು, ಚಂಡಾಲರು ಹೀಗೆ ಯಾವ ವರ್ಗದವರಾದರೂ ಕೂಡ ವೀರಶೈವ ದೀಕ್ಷೆಯನ್ನು ಹೊಂದಬಹುದೆಂದು, ದೀಕ್ಷೆಯ ನಂತರ ಅವರು ಸಂಸ್ಕರಿತರಾಗಿ, ಲಿಂಗಧಾರಿಗಳಾಗಿ ಸಾಕ್ಷಾತ್ ಶಿವಸ್ವರೂಪರೇ ಆಗುವರೆಂದು ಹೇಳಿದೆ. ಯಾರು ದೀಕ್ಷೆಯನ್ನು ಹೊಂದಿ ಶಿವನಲ್ಲಿ ಏಕಮನಸ್ಕರಾಗಿ ಭಕ್ತಿಯನ್ನು ಆಚರಿಸುವರೋ ಅಂಥವರು ಸರ್ವಮಾನ್ಯರಾಗುವರು. ಲಿಂಗಧಾರಿಗಳಾದವರು ಪರಸ್ಪರರಲ್ಲಿ ಯಾವ ಭೇಧವನ್ನೂ ಆಚರಿಸಬಾರದು ಎಂದು ಹೇಳಿದೆ. 

ಆಗಮಗಳ ಈ ಉಪದೇಶದ ಆಚರಣೆಯು ಬಸವಾದಿ ಶರಣರಲ್ಲಿ ಕೂಡ ಕಾಣಬಹುದಾಗಿದೆ. ಅವರ ನಡೆ,ನುಡಿ ಎಲ್ಲವೂ ಆಗಮಪ್ರೇರಿತವಾಗಿರುವುದನ್ನು ಅವರ ವಚನಗಳೇ ಸ್ಪಷ್ಟಪಡಿಸುತ್ತವೆ.

ಉದಾಹರಣೆಗೆ –

 ೧. ಆವ ಕುಲವಾದಡೇನು? ಶಿವಲಿಂಗವಿದ್ದವನೇ ಕುಲಜನು,

     ಕುಲವರಸುವರೇ ಶರಣರಲ್ಲಿ, ಜಾತಿಸಂಕರನಾದ ಬಳಿಕ?

     ಶಿವಧರ್ಮಕುಲೇಜಾತಃ ಪುನರ್ಜನ್ಮ ವಿವರ್ಜಿತಃ |

     ಉಮಾ ಮಾತಾ ಪಿತಾ ರುದ್ರಃ ಐಶ್ವರ್ಯಾಂ ಕುಲಮೇವಚ ||

    ಎಂಬುದಾಗಿ,

     ಒಕ್ಕುದ ಕೊಂಬೆನವರಲ್ಲಿ, ಕೂಸ ಕೊಡುವೆ.

     ಕೂಡಲಸಂಗಮದೇವಾ, ನಂಬುವೆ ನಿಮ್ಮ ಶರಣನು. 

೨. ದೇವ ದೇವಾ ಬಿನ್ನಹ ಅವಧಾರು;

     ವಿಪ್ರ ಮೊದಲು ಅಂತ್ಯಜ ಕಡೆಯಾಗಿ,

     ಶಿವಭಕ್ತರಾದವರನ್ನೆಲ್ಲನೊಂದೆ ಎಂಬೆ 

     ಕೂಡಲಸಂಗಮದೇವಾ ||

 ೩. ಬ್ರಾಹ್ಮಣನಾಗಲಿ ಕ್ಷತ್ರೀಯನಾಗಲಿ ವೈಶ್ಯನಾಗಲಿ ಶೂದ್ರನಾಗಲಿ 

     ಆವ ಜಾತಿಯಲ್ಲಿ ಹುಟ್ಟಿದಾತನಾದಡಾಗಲಿ,

      ಗುರುಕಾರುಣ್ಯವ ಪಡೆದು ಅಂಗದ ಮೇಲೆ ಲಿಂಗ ಧಾರಣವಾಗಿ 

     ಆಚಾರಕ್ರಿಯಾಸಂಪನ್ನನಾದ ಮಹಾತ್ಮನೇ ಮೂರು ಲೋಕಕ್ಕಧಿಕ ನೋಡಾ !

     ಅದೆಂತೆಂದೊಡೆ,

     “ಬ್ರಾಹ್ಮಣಃ ಕ್ಷತ್ರೀಯೋ ವೈಶ್ಯಃ ಶೂದ್ರೋವಾಪ್ಯಂತ್ಯಜೋಪಿ ವಾ |

      ಶಿವಭಕ್ತಃ ಸದಾ ಪೂಜ್ಯಃ ಸರ್ವಾವಸ್ಥಾಂ ಗತೋಪಿ ವಾ ||

ಎಂದುದಾಗಿ 

ಇಂತಪ್ಪ ಪರಮ ಶಿವಭಕ್ತನು ಶರಣ ನೋಡಾ ಅಖಂಡೇಶ್ವರಾ.

ಎಂಬ ಷಣ್ಮುಖಸ್ವಾಮಿಗಳ ವಚನವು ಮೇಲೆ ಹೇಳಿದ ಪಾರಮೇಶ್ವರಾಗಮದ ‘ಬ್ರಾಹ್ಮಣಾಃ ಕ್ಷತೀಯಾಃ ..’ ಎಂಬ ಶ್ಲೋಕದ  ತತ್ವವನ್ನೇ ಹೇಳುತ್ತದೆ. 

ಪಾರಮೇಶ್ವರಾಗಮದ ಈ ಉಪದೇಶವು ಕಾರಣಾಗಮದಲ್ಲಿ ಕೂಡ ಕಾಣಬಹುದಾಗಿದೆ. 

“ಬ್ರಹ್ಮಚಾರಿ ಗೃಹಸ್ಥೋ ವಾ ವಾನಪ್ರಸ್ಥೋ ಯತಿಸ್ತು ವಾ||

 ಬ್ರಾಹ್ಮಣ ಕ್ಷತೀಯೋ ವಾಥ ವೈಶ್ಯಃ ಶೂದ್ರೋನ್ತ್ಯಜೋಪಿ ವಾ|

 ಪುಮಾನ್ ನಾರ್ಯಥವಾ ಕ್ಲೀಬಃ ಸರ್ವೇ ಮೋಕ್ಷಾಧಿಕಾರಿಣಃ ||

ಕೇವಲ ಪುರುಷನಿಗಷ್ಟೇ ಅಲ್ಲದೇ ಸ್ತ್ರೀಯರಿಗೂ, ನಪುಂಸಕ ವರ್ಗದವರಿಗೂ ವೀರಶೈವ ದೀಕ್ಷಾಧಿಕಾರವಿರುವುದೆಂದು ಆಗಮಗಳ ಸ್ಪಷ್ಟೋಕ್ತಿಯಿರುವುದು. ಧರ್ಮಾಚರಣೆಯಲ್ಲಿ ಎಲ್ಲ ಜಾತಿ, ಮತ, ಲಿಂಗ ಸರ್ವವಯೋಮಾನದವರು, ಕಳ್ಳರು, ವಂಚಕರು ಚಂಡಾಲರು ಹೀಗೆ ಎಲ್ಲರಿಗೂ ಕೂಡ ಸಮಾನವಾದ ಯೋಗ್ಯತೆಯನ್ನು ಶೈವಾಗಮದಲ್ಲಿ ಹೇಳಿದೆ. ಇದೇ ಮಾರ್ಗದಲ್ಲಿ ಬಸವಾದಿ ಶರಣರು ಕೂಡ ನಡೆದಿರುವುದು ಸ್ಪಷ್ಟವಾಗಿದೆ.  ಶೈವಾಗಮಗಳ ಈ ವೈಶಾಲ್ಯತೆಯನ್ನು ಶರಣರ ಆಚರಣೆಯಲ್ಲಿ ಮತ್ತವರ ವಚನಗಳಲ್ಲಿ ಕಾಣಬಹುದಾಗಿದೆ. 

ಪ್ರಸ್ತುತ ಒಂದು ಮಾತನ್ನು ನಾವಿಲ್ಲಿ ಸ್ಪಷ್ಟವಾಗಿ ಅರಿಯಬಹುದು. ಏನೆಂದರೆ, ವೇದಾಗಮೋಕ್ತ ವೀರಶೈವ ಧರ್ಮದಲ್ಲಿ ಸರ್ವಸಮಾನತೆಯ ಬೋಧನೆಯು ಸ್ಪಷ್ಟವಾಗಿದೆ. ಇಂತಹ ಅದ್ವೀತೀಯ ತತ್ವಕ್ಕೆ ಮನಸೋತು ಶೈವ ಬ್ರಾಹ್ಮಣಾಗಿದ್ದ ಬಸವಣ್ಣನವರು  ವೀರಶೈವ ದೀಕ್ಷಾಸಂಪನ್ನರಾಗಿ ಅಂತೆಯೇ ಬದುಕಿದರು. ಬಸವಾದಿ ಶರಣರು ಆಗಮೋಕ್ತ ವೀರಶೈವವನ್ನು ನಿಷ್ಠೆಯಿಂದ ಆಚರಿಸಿ ವೀರಶೈವದ ತತ್ವಗಳನ್ನು ತಮ್ಮ ವಚನಗಳ ಮೂಲಕ ಜನಮಾನಸದಲ್ಲಿ ನೆಲೆ ನಿಲ್ಲುವಂತೆ ಮಾಡಿ ಧರ್ಮೋತ್ಥಾನ ಮಾಡಿದ್ದು ಸ್ಮರಣೀಯವಾಗಿದೆ.

ವಿಷಯ ಸಂಗ್ರಹಣೆ –

೧. ಶಿವಾಗಮಗಳು ಮತ್ತು ವಚನ ಸಾಹಿತ್ಯ

೨. ವೀರಶೈವ ಅಷ್ಟಾವರಣ ವಿಜ್ಞಾನ  

Someshwar Gurumath

Someshwar Gurumath is an author, filmmaker, poet, songwriter, and public speaker from Hubli, Karnataka. He has a BSc in Visual Media and is currently pursuing PG Diploma in Public leadership at the Rashtram School of Public Leadership, Rishihood University. He has published two books so far, titled Nanu Nanna Jagattu and Payanigana Kavyagalu, both of which are anthologies of his poems. Through his writings and filmmaking, he aspires to bring about a unified cultural consciousness and motivate people to work towards the renaissance of Bhārata.

0 Reviews

Related post

Leave a Reply

Your email address will not be published. Required fields are marked *