ಗುರುವೆನ್ನ ಮೊದಲ ಆವರಣ.

 ಗುರುವೆನ್ನ ಮೊದಲ ಆವರಣ.

ವೀರಶೈವ ಅಷ್ಟಾವರಣಗಳಲ್ಲಿ ಮೊದಲನೇಯ ಆವರಣವೇ ಗುರು. ಧರ್ಮದ ಆಚಾರ ವಿಚಾರಗಳೆರಡಕ್ಕೂ ಶ್ರೀ ಗುರುವೇ ಮಾರ್ಗದರ್ಶಕನಾಗಿರುತ್ತಾನೆ. ಪೂಜ್ಯನೀಯ ಆವರಣಗಳೆಂದು ಪರಿಗಣಿಸಲ್ಪಡುವ ಗುರು, ಲಿಂಗ ಮತ್ತು ಜಂಗಮಗಳಲ್ಲಿಯೂ ಗುರುವೇ ಪ್ರಥಮ. ವೇದ, ಮನು ಮತ್ತು ಕ್ರಿಯಾದೀಕ್ಷೆಯ ಮೂಲಕ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರಗಳಿಗೆ ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗಗಳನ್ನು ಪಡೆದುಕೊಂಡು ಆಣವ, ಮಾಯೀಯ ಮತ್ತು ಕಾರ್ಮಿಕಗಳೆಂಬ ತ್ರಿಮಲಗಳಿಂದ ದೂರನಾಗುತ್ತಾನೆ. ಹರ ಮುನಿದರೂ ಗುರು ಕಾಯುತ್ತಾನೆಂಬ ನಂಬಿಕೆ ವೀರಶೈವರಲ್ಲಿದೆ. ಈ ಮಾತಿಗೆ ಪುಷ್ಟಿ ಕೊಡುವಂತೆ ಚಂದ್ರಜ್ಞಾನಗಮವು ಹೀಗೆ ಹೇಳುತ್ತದೆ – 

    “ಶಿವೋ ರೂಷ್ಟೆ ಗುರುಸ್ತ್ರಾತಾ ನ ರೂಷ್ಟೆ ನಿಜಸದೃರೌ |

     ತ್ರಾತಾ ಶಿವಸ್ತದೇತಸ್ಮಾತ್ ಗುರುಪೂಜಾರತೋ ಭವೇತ್ ||

     ಯಃ ಸ್ವಸ್ಯ ಗುರುಪೂಜಾಂ ತು ತ್ಯಕ್ತ್ವಾ ಶಿವಪದಂ ಯಜೇತ್ |

     ಪರಾಗ್ಮುಖಃ ಶಿವಸ್ತಸ್ಯ ನರಕಂ ಸಂಪ್ರಯಚ್ಛತು ||”

ಶಿವನು ಕುಪಿತನಾದರೆ ಸಾಧಕನನ್ನು ಗುರುವು ರಕ್ಷಿಸುತ್ತಾನೆ. ಆದರೆ ಗುರುವು ಕುಪಿತನಾದರೆ ಶಿವನು ರಕ್ಷಿಸಲಾರನು. ಆದ್ದರಿಂದ ಸಾಧಕನಾದವನು ಸದಾ ಗುರುವನ್ನು ಪೂಜಿಸುತ್ತಿರಬೇಕು. ಕೇವಲ ಶಿವಪೂಜೆಯನ್ನು ಮಾಡುತ್ತಾ ಗುರುವನ್ನ ಅಲಕ್ಷಿಸಿದರೆ ಅಂತವರ ಪಾಲಿಗೆ ಗುರುವು ವಿಮುಖನಾಗುತ್ತಾನೆ. ಅಂಥವನು ನರಕಕ್ಕೆ ಭಾಜನನಾಗುತ್ತಾನೆ. ಶ್ರೀ ಸಿದ್ಧಾಂತ ಶಿಖಾಮಣಿಯು ಈ ವಿಷಯಕ್ಕೆ ಸಂಬಂಧಿಸಿದಂತೆ ಹೀಗೆ ಹೇಳುತ್ತದೆ –

   ಗುರುಭಕ್ತಿರ್ವಿಹೀನಸ್ಯ ಶಿವಭಕ್ತಿರ್ನಜಾಯತೇ |

   ಅತಃ ಶಿವೋ ಯಥಾ ಭಕ್ತಿಸ್ತಥಾ ಭಕ್ತಿರ್ಗುರಾವಪಿ ||

ಗುರುಭಕ್ತಿಯಿಲ್ಲದವನಿಗೆ ಶಿವಭಕ್ತಿಯು ಹುಟ್ಟುವುದಿಲ್ಲ. ಆದುದರಿಂದ ಶಿವನಂತೆ  ಗುರುವಿನಲ್ಲಿಯೂ ಭಕ್ತಿಯಿಡಬೇಕು. ಇದೇ ವಿಷಯವನ್ನು ಶ್ವೇತಾಶ್ವತರಶ್ರುತಿಯು “ಯಸ್ಯ ದೇವೇ ಪರಾಭಕ್ತಿರ್ಯಥಾ ದೇವೇ ತಥಾ ಗುರೌ” ಎಂದು ಸಾರುತ್ತದೆ. ಇದನ್ನೇ ೧೨ನೇ ಶತಮಾನದ ಬಸವಣ್ಣನವರು ತಮ್ಮ ವಚನವೊಂದರಲ್ಲಿ ಹೀಗೆ ಹೇಳುತ್ತಾರೆ –

  ಮಡಕೆಯ ಮಾಡುವಡೆ ಮಣ್ಣೇ ಮೊದಲು 

  ತೊಡಿಗೆಯ ಮಾಡುವಡೆ ಹೊನ್ನೆ ಮೊದಲು 

   ಶಿವಪಥವರಿದೊಡೆ ಗುರುಪಥವೇ ಮೊದಲು 

  ಕೂಡಲಸಂಗಮದೇವರನರಿವಡೆ ಶರಣರ ಸಂಗವೇ ಮೊದಲು.

ಗುರುವು ದೀಕ್ಷೆ ಮತ್ತು ಮೋಕ್ಷವನ್ನು ದಯಪಾಲಿಸತಕ್ಕವನು. ಗುರುವಿಲ್ಲದೇ ಯಾವ ಸಾಧನವೂ ಅಸಾಧ್ಯ. ಇಲ್ಲಿ ಮೋಕ್ಷಪಥವೆಂದರೆ   “ಷಟ್ಸ್ಥಲ ಮಾರ್ಗ”. ಷಟ್ಸ್ಥಲಮಾರ್ಗಕ್ಕೆ ದೀಕ್ಷೆಯು ಪರಮ ಅವಶ್ಯಕವಾಗಿದೆ. ಗುರುವು ದೀಕ್ಷೆಯನ್ನು ಕೊಡುವವನಲ್ಲದೇ  ಮೋಕ್ಷಸಾಧನಗಳಾದ ಅಷ್ಟಾವರಣಗಳನ್ನು ದಯಪಾಲಿಸುತ್ತಾನೆ. ಈ ಕಾರ್ಯವನ್ನು ಮಾಡುವ ಗುರುವು ಹೇಗಿರುತ್ತಾನೆಂದು ಶ್ರೀ ಸಿದ್ಧಾಂತ ಶಿಖಾಮಣಿಯು ಹೇಳುವಾಗ ‘ಗುರು’ ಶಬ್ದೋತ್ಪತ್ತಿ ಮತ್ತು ಅವನ ಲಕ್ಷಣಗಳನ್ನು ಹೀಗೆ ತಿಳಿಸುತ್ತದೆ –

  “ಗುಣಾತೀತಂ ಗುಕಾರಂ ಚ ರೂಪಾತೀತಂ ಋಕಾರಕಂ |

   ಗುಣಾತೀತಮರೂಪಂ ಚ ಯೋ ದದ್ಯಾತ್ ಸ ಗುರು ಸ್ಮೃತಃ ||”

ಗುರು ಎಂಬ ಪದದಲ್ಲಿ ‘ಗು’ ಎಂಬ ಅಕ್ಷರವು ಸತ್ವಾದಿ ಗುಣರಾಹಿತ್ಯವನ್ನು, ಮತ್ತು ‘ರು’ ಎಂಬ ಅಕ್ಷರವು ಅಶುದ್ಧಮಾಯಾರೂಪರಾಹಿತ್ಯವನ್ನು ಬೋಧಿಸುತ್ತದೆ. ಹೀಗೆ ನಿರ್ಗುಣ ನಿರಾಕಾರನಾದ ಪರಶಿವಬ್ರಹ್ಮಸ್ವರೂಪವನ್ನು ಯಾರು ಅನುಗ್ರಹಿಸುವನೋ ಅಂಥವನು ‘ಗುರು’ ಎಂದೆನಿಸುತ್ತಾನೆ. ಗುರುವನ್ನು ‘ಆಚಾರ್ಯ’ನೆಂಬ ಅಭಿದಾನದಿಂದ ಕರೆದಿರುವ ಶ್ರೀ ಸಿದ್ಧಾಂತ ಶಿಖಾಮಣಿಯು ಆಚಾರ್ಯನ ಸ್ವರೂಪವನ್ನು ಹೀಗೆ ನಿರೂಪಿಸುತ್ತದೆ –

  “ಆಚಿನೋತಿ ಚ ಶಾಸ್ತ್ರಾರ್ಥನಾಚಾರೇ ಸ್ಥಪಯತ್ಯಪಿ |

   ಸ್ವಯಾಮಾಚರತೇ ಯಸ್ತು ಸ ಆಚಾರ್ಯ ಇತಿ ಸ್ಮೃತಃ ||”

ಯಾರು ಶಿಷ್ಯರಿಗೆ ಶಾಸ್ತ್ರಾರ್ಥವನ್ನು ಬೋಧಿಸಿ, ಅವರನ್ನು ವೀರಶೈವಾಚಾರದಲ್ಲಿ ನೆಲೆಗೊಳಿಸುವುದರ ಜೊತೆಗೆ ತಾನೂ ಸಹ ಆಚಾರಸಂಪನ್ನನಾಗುತ್ತಾನೆಯೋ ಅವನು ಆಚಾರ್ಯನು. ಇದು ಪ್ರಸ್ತುತವಾಗಿ ಅತ್ಯವಶ್ಯಕವಾಗಿದೆ. ಏಕೆಂದರೆ, ನುಡಿದಂತೆ ನಡೆಯುವವರು ಅತಿ ವಿರಳವಾಗುತ್ತಿರುವ ಈ ಕಾಲದಲ್ಲಿ ಗುರುವು ಉಪದೇಶ ಮಾಡಿದರೆ ಸಾಲದು ತಾನೂ ಸಹ ಆಚಾರವಂತನಾಗಬೇಕೆಂಬ ಮಾರ್ಮಿಕವಾದ ಸಂದೇಶವಿಲ್ಲಿದೆ. ಇಂತಹ ಗುರುವಾಗಬೇಕಾದರೆ ಅನುಸರಿಸಬೇಕಾದ ನಿಯಮಗಳನ್ನು ಶೈವಾಗಮಗಳು ಮತ್ತು ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಚಂದ್ರಜ್ಞಾನಾಗಮವು ಗುರುವಿನ ಲಕ್ಷಣಗಳನ್ನು ಹೀಗೆ ವಿವರಿಸುತ್ತದೆ –

  ಗುರೂಶ್ಚ ಗುಣವಾನ್ ಪ್ರಾಜ್ಞಃ ಪರಮಾನಂದಭಾಸಕಃ |

  ತತ್ವವಿಶ್ಚಿವಸಂಸಕ್ತೋ ಮುಕ್ತಿದೋ ನ ತು ಚಾಪರಃ ||

  ಶೈವಸಿದ್ಧಾಂತತತ್ವಜ್ಞಃ ಪ್ರತಿಷ್ಠಾಮಂತ್ರಪಾರಗಃ |

   ಮೋಕ್ಷದಃ ಕರುಣೋಪೇತೋ ವೀತರಾಗೋ ವಿಮತ್ಸರಃ ||

  ತ್ಕ್ರಿಯಾದಿಜ್ಞಾನಪರ್ಯಂತಶಿವತತ್ವವಿನಿಶ್ಚಯಃ |

  ಸಂಪ್ರದಾಯಾಗತಜ್ಞಾನೋ  ಗುರೂವಂಶಸಮುದ್ಭವಃ ||

  ಲಿಂಗಾಂಗಸ್ಥಲಭೇದಜ್ಞಃ ಷಟ್ಸ್ಥಲಜ್ಞಾನತತ್ಪರಃ |

  ದೀಕ್ಷಾಕರ್ಮದಿಕುಶಲಃ ಷಡಧ್ವಜ್ಞಾನವತ್ಸಲಃ ||

  ಶಿವಸ್ಯ ಚ ಗುರೋರ್ಭಕ್ತಃ ಶಿವೈಕಾಹಿತಮಾನಸಃ |

  ಶಿವಾರ್ಚನಾಸಕ್ತಚಿತ್ತಃ ಶಿವಧ್ಯಾನೈಕತತ್ಪರಃ ||

“ಗುರುವು ಸರ್ವಸದ್ಗುಣಸಂಪನ್ನನಾಗಿರಬೇಕು, ಪ್ರಾಜ್ಞನಾಗಿರಬೇಕು, ಪರಮಾನಂದವನ್ನುಟುಮಾಡುವಂತವನಾಗಿರಬೇಕು, ತತ್ವಜ್ಞಾನಿಯಾಗಿ ಮೋಕ್ಷದಾಯಕನಾಗಿರಬೇಕು, ಶೈವಸಿದ್ಧಾಂತವನ್ನ ತಿಳಿದವನಾಗಿರಬೇಕು, ಮಂತ್ರಜ್ಞನಾಗಿರಬೇಕು, ಕರುಣಾಮೂರ್ತಿಯಾಗಿರಬೇಕು, ರಾಗ ಮತ್ತು ಮತ್ಸರಗಳಿಂದ ದೂರನಾಗಿರಬೇಕು, ಕ್ರಿಯಾ, ಚರ್ಯಾ, ಯೋಗ ಮತ್ತು ಜ್ಞಾನಗಳನ್ನು ಅರಿತವನಾಗಿರಬೇಕು, ಸಂಪ್ರದಾಯದಿಂದ ಬಂದ ಜ್ಞಾನವನ್ನು ತಿಳಿದವನಾಗಿರಬೇಕು, ಲಿಂಗಸ್ಥಲ – ಅಂಗಸ್ಥಲಗಳ ಭೇದವನರಿತಿರಬೇಕು, ಷಟ್ಸ್ಥಲಜ್ಞಾನದಲ್ಲಿ ತತ್ಪರನಾಗಿರಬೇಕು, ದೀಕ್ಷಾದಿ ಕರ್ಮಗಳನ್ನು ಮಾಡುವುದರಲ್ಲಿ ಕುಶಲನಾಗಿರಬೇಕು, ಆರು ಅಧ್ವಗಳ ಜ್ಞಾನದಿಂದ ಸಂಪ್ರೀತನಾದವನಾಗಿರಬೇಕು, ಶಿವ ಮತ್ತು ಗುರುಗಳಲ್ಲಿ ಭಕ್ತಿಯುಳ್ಳವನಾಗಿರಬೇಕು, ಶಿವನಲ್ಲಿ ಏಕೋಭಾವನೆಯಿಂದಿರುವವನೂ ಶಿವಪೂಜೆಯಲ್ಲಿ ಮಗ್ನವಾದ ಮನಸ್ಸುಳ್ಳವನು ಮತ್ತು ಶಿವಧ್ಯಾನವೊಂದರಲ್ಲೇ ನಿರತನಾದವನಾಗಿರಬೇಕು ಎಂದು ಹೇಳುತ್ತದೆ. ಇನ್ನು ಪಾರಮೇಶ್ವರಾಗಮದಲ್ಲಿ –    

     ಸರ್ವಲತ್ಕ್ಷಣಸಂಪನ್ನಂ ಸರ್ವಜ್ಞಮ್ ಸರ್ವಸಮ್ಮತಂ |

   ಸದಾಚಾರರತಂ ಶುದ್ದಂ ಶಿವಭಕ್ತಮಲೋಲುಪಮ್ ||

   ಯಥಾರ್ಥವಾದಿನಂ ಶಾಂತಂ ದ್ವೇಷಾಸೂಯಾದಿವರ್ಜಿತಂ |

   ವಿಧಿತಾಖಿಲಶಾಸ್ತ್ರಾರ್ಥಮಿಂಗಿತಜ್ಞಮನಾಕುಲಂ |

    ಅನರ್ಥಾತುರಮಾತ್ಮಜ್ಞಮಕಾಮುಕಮವಶ್ಚಕಂ |

    ವಾಗ್ಮಿನಂ ಶಿವತತ್ವಾರ್ಥಬೋಧಕಂ ಹೃಷ್ಟಮಾನಸಂ |

   ಏತಾದೃಶಗುಣೋಪೇತಮುಪೇಯಾದ್ ಗುರೂಮೀಶ್ವರಂ ||

   ಸರ್ವಶುಭಲಕ್ಷಣಗಳಿಂದ ಕೂಡಿದವನು, ಸರ್ವಜ್ಞನು, ಸರ್ವ ಗೌರವಕ್ಕೆ ಪಾತ್ರನು, ಸದಾಚಾರದಲ್ಲಿ ನಿರತನು, ಶುದ್ಧನು, ಶಿವಭಕ್ತನು, ಚಂಚಲತೆಯಿಲ್ಲದವನು, ಸತ್ಯವನ್ನೇ ನುಡಿಯುವವನು, ಶಾಂತನು ದ್ವೇಷ ಅಸೂಯೆಗಳಿಲ್ಲದವನು, ಎಲ್ಲ ಶಾಸ್ತ್ರಗಳಲ್ಲಿ ಪರಿಣಿತನು, ರಹಸ್ಯವನ್ನು ತಿಳಿದವನು, ಅವ್ಯಾಕುಲನು, ದ್ರವ್ಯಲೋಭರಹಿತನು, ಆತ್ಮಜ್ಞಾನಿಯು, ವಿಷಯಾಸಕ್ತಿಯಿಲ್ಲದವನು, ವಂಚನೆಯಿಲ್ಲದವನು, ಪ್ರವಚನಪಟುವು, ಶಿವತತ್ವದ ಮರ್ಮವನ್ನು ತಿಳಿದವನು ಮತ್ತು ಆನಂದತುಂಬಿದ ಮನಸ್ಸುಳ್ಳವನು, ಈ ರೀತಿಯ ಗುಣಗಳಿಂದ ಕೂಡಿದ ಈಶ್ವರ ಸ್ವರೂಪನಾದ ಗುರುವು ನಿಜವಾದ ಗುರುವಾಗುತ್ತಾನೆ. ಇನ್ನು ಶ್ರೀ ಸಿದ್ಧಾಂತ ಶಿಖಾಮಣಿಯು ಗುರುವಿನ ಲಕ್ಷಣವನ್ನು ಪ್ರತಿಪಾದಿಸುವಾಗ ಈ ಮೇಲೆ ತಿಳಿಸಿದ ಎರೆಡೂ ಆಗಮಗಳ ಸಾರವನ್ನು ಹೇಳಿದಂತಿದೆ. ಆ ವಿವರಣೆ ಇಂತಿದೆ – 

     ಉಪೈತಿಲೋಕವಿಖ್ಯಾತಂ ಲೋಭಮೋಹವಿವರ್ಜಿತಂ |

    ಆತ್ಮತತ್ವವಿಚಾರಜ್ಞಂ ವಿಮುಕ್ತವಿಷಯಭ್ರಮಂ ||

    ಶಿವಸಿದ್ಧಾಂತತತ್ವಜ್ಞಂ ಛಿನ್ನಸಂದೇಹವಿಭ್ರಮಂ |

    ಸರ್ವತಂತ್ರಪ್ರಯೋಗಜ್ಞಂ ಧಾರ್ಮಿಕಂ ಸತ್ಯವಾದಿನಂ ||

   ಕುಲತ್ರಮಗತಾಚಾರಂ ಕುಮಾರ್ಗಚಾರವರ್ಜಿನಂ |

    ಶಿವಜ್ಞಾನಪರಂ ಶಾಂತಂ ಶಿವತತ್ವವಿವೇಕಿನಂ ||

    ಭಸ್ಮೋದ್ಧೂಲನನಿಷ್ಣಾತಂ ಭಸ್ಮತತ್ವವಿವೇಕಿನಂ |

    ತ್ರಿಪುಂಡ್ರಧಾರನೋತ್ಕಂಠಮ್ ಧೃತರುದ್ರಾಕ್ಷಮಾಲಿಕಂ ||

    ಲಿಂಗಧಾರಣಸಂಯುಕ್ತಮ್ ಲಿಂಗಪೂಜಾಪರಾಯಣಂ |  

    ಲಿಂಗಾಂಗಯೋಗತತ್ವಜ್ಞಂ ನಿರೂಡಾದ್ವೈತವಾಸನಂ |

     ಲಿಂಗಾಂಗಸ್ಥಲಭೇದಜ್ಞಂ ಶ್ರೀಗುರುಂ ಶಿವವಾದಿನಂ ||

ಗುರುವಾದವನು ಲೋಕವಿಖ್ಯಾತನೂ, ಲೋಭಮೋಹಗಳಿಂದ ದೂರನು, ಆತ್ಮತತ್ವಜ್ಞನು,  ವಿಷಯವಿಮುಕ್ತನಾಗಿರಬೇಕು. ಶಿವಸಿದ್ಧಾಂತತತ್ವಜ್ಞ ಇತ್ಯಾದಿ ಶಬ್ದಗಳಿಂದ ಗುರುವಿನ ಶ್ರೋತ್ರಿಯತ್ವ, ಲಿಂಗಾಂಗಯೋಗತತ್ವಜ್ಞ, ನಿರೂಢಾದ್ವೈತವಾಸನಂ ಇತ್ಯಾದಿಗಳಿಂದ ಅವನ ಬ್ರಹ್ಮನಿಷ್ಠೆಯು ನಿಶ್ಚಯವಾಗುತ್ತದೆ. ಗುರುವು ಜ್ಞಾನೋಪದೇಶದಿಂದ ಮತ್ತು ವೀರಶೈವ ಸಿದ್ಧಾಂತ ಗ್ರಂಥಗಳಲ್ಲಿ ಪ್ರತಿಪಾದಿತವಾದ ಆಚಾರಗಳನ್ನು ಸ್ವಯಂ ತಾನು ಆಚರಿಸುವುದರಿಂದ ಅಜ್ಞರಿಗೆ ಮಾರ್ಗದರ್ಶಕನಾಗುತ್ತಾನೆ. ಆದ್ದರಿಂದ ಈ ಸಿದ್ಧಾಂತದ ಪ್ರಕಾರ ಗುರು ಶಿಷ್ಟಾಚಾರಸಂಪನ್ನನಾಗಿರಬೇಕಾಗುತ್ತದೆ. ಈ ಕಾರಣದಿಂದಲೇ ಧಾರ್ಮಿಕ, ಸತ್ಯವಾದಿ, ದುಷ್ಟ ಆಚಾರಗಳನ್ನು ಬಿಟ್ಟ, ಭಸ್ಮೋದ್ಧೂಲನದಲ್ಲಿ ನಿಷ್ಣಾತನಾದ, ಲಿಂಗಧಾರಣೆ ಮಾಡಿಕೊಂಡಿರುವ, ಲಿಂಗಪೂಜಾಪರಾಯಣ ಮೊದಲಾದ ಶಬ್ದಗಳಿಂದ ಅವನ ಧರ್ಮಾಚರಣೆಯ ಶೀಲತ್ವವನ್ನು ಸಹ ನಿರೂಪಿಸಲಾಗಿದೆ. 

ಅಂತೆಯೇ ಶೈವಾಗಮಗಳು ಅನೇಕ ಗುರುವಾದವನ್ನು ತಿರಸ್ಕರಿಸುತ್ತ, ಕುಟುಂಬಕ್ಕೊಬ್ಬನೇ ಗುರುವಿರಬೇಕೆಂದು ಹೇಳಿವೆ. ಅದನ್ನು ಸೂಕ್ಶ್ಮಾಗಮವು ಹೀಗೆ ಹೇಳಿದೆ – 

   ಪಿತೃಭ್ರಾತೃಕಲತ್ರಾಣಂ ಪುತ್ರಾದೀನಾಂ ತಥೈವ ಚ |

   ದೀಕ್ಷಾಶಿಕ್ಷಾವಿಧಾನಾರ್ಥಮೇಕ ಏವ ಗುರುರ್ಭವೇತ್ ||

ತಾನೊಬ್ಬನೇ ಅಲ್ಲದೆ, ತಂದೆ, ಸಹೋದರ, ಹೆಂಡತಿ, ಮಕ್ಕಳು ಮನೆಯವರೆಲ್ಲರಿಗೂ ಶಿಕ್ಷೆ, ದೀಕ್ಷೆಗಳನ್ನು ಪಡೆಯಲು ಒಬ್ಬನೇ ಗುರುವನ್ನ ಆಶ್ರಯಿಸಬೇಕು. ಗುರುಗಳು ಬೇರೆ ಬೇರೆ ಆದರೆ ಅಲ್ಲಿ ಭೇದ ಭಾವಗಳು ಉಂಟಾಗುತ್ತವೆ. ಒಂದು ವೇಳೆ ಶಿಷ್ಯನಾದವನು ಗುರುವನ್ನು ಬದಲಿಸಿದರೆ ನರಕವನ್ನು ಹೊಂದುತ್ತಾನೆಂದು ಪಾರಮೇಶ್ವರಾಗಮ ಎಚ್ಚರಿಸುತ್ತದೆ.  

ಗುರುವು ಒಬ್ಬನೇ ಆದರೂ ಶಿಷ್ಯರಿಗೆ ದೀಕ್ಷೆ, ಶಿಕ್ಷಣ ಮತ್ತು ಜ್ಞಾನೋಪದೇಶ ಮಾಡುವುದರಿಂದ ದೀಕ್ಷಾಗುರು, ಶಿಕ್ಷಾಗುರು ಮತ್ತು ಜ್ಞಾನಗುರುವೆಂದು ಮೂರು ವಿಧನಾಗಿದ್ದಾನೆ. ಸೂಕ್ಶ್ಮಾಗಮದ ಪ್ರಕಾರ ಶಿಷ್ಯನಿಗೆ ಶಿವದೀಕ್ಷೆಯನ್ನು ದಯಪಾಲಿಸುವುದರಿಂದ ಗುರುವು ದೀಕ್ಷಾಗುರುವೆಂದೆನಿಸಿಕೊಳ್ಳುತ್ತಾನೆ. ಗುರು,ಲಿಂಗ,ಜಂಗಮರು ಒಂದೇ ಸ್ವರೂಪರೆಂದು ತಿಳಿಸುವಾಗ ಶಿಕ್ಷಾಗುರುವೆಂದೆನಿಸಿಕೊಳ್ಳುತ್ತಾನೆ. ತನ್ನ ಪೂರ್ವಾರ್ಜಿತಗಳಾದ ಪುಣ್ಯ ಮತ್ತು ಸಂಸ್ಕಾರಗಳ ಬಲದಿಂದ ಸಂಪಾದಿಸಿದ ವಿಶೇಷ ಜ್ಞಾನದಿಂದ ಅನುಭಾವಗುರು(ಜ್ಞಾನಗುರು)ವೆಂದೆನಿಸಿಕೊಳ್ಳುತ್ತಾನೆ. ಶ್ರೀ ಸಿದ್ಧಾಂತ ಶಿಖಾಮಣಿಯು ದೀಕ್ಷಾಗುರುವಿನ ಕುರಿತು ಹೀಗೆ ಹೇಳುತ್ತದೆ –

  ದೀಯತೇ ಪರಮಂ ಜ್ಞಾನಂ ಕ್ಷೀಯತೇ ಪಾಶಬಂಧನಂ|

  ಯಯಾ ದೀಕ್ಷೇತಿ ಸಾ ತಸ್ಯಾಂ ಗುರುರ್ದೀಕ್ಷಾಗುರುಃ ಸ್ಮೃತಃ ||

“ಯಾವುದರಿಂದ ಶ್ರೇಷ್ಠವಾದ ಶಿವಜ್ಞಾನವು ಅನುಗ್ರಹಿಸಲ್ಪಡುವುದೋ, ಯಾವುದರಿಂದ ಆಣವ, ಮಾಯೀಯ ಮತ್ತು ಕಾರ್ಮಿಕ ಎಂಬ ಮಲತ್ರಯರೂಪ ಪಾಶವು ಕ್ಷೀಣಿಸುವುದೋ ಅದು ದೀಕ್ಷೆಯೆಂದೆನಿಸುವುದು. ಅಂತಹ  ದೀಕ್ಷೆಯನ್ನುಅನುಗ್ರಹಿಸುವವನು ದೀಕ್ಷಾಗುರುವೆಂದೆನಿಸಿಕೊಳ್ಳುವನು. ಇನ್ನು ಶಿಕ್ಷಾ ಗುರುವೆಂದರೆ 

ದೀಕ್ಷಾಗುರುರಸೌ ಶಿಕ್ಷಾಹೇತುಃ ಶಿಷ್ಯಸ್ಯ ಬೋಧಕಃ |

  ಪ್ರಶ್ನೋತ್ತರಪ್ರವಕ್ತಾ ಚ ಶಿಕ್ಷಾಗುರುರಿತಿರ್ಯತೇ ||

 ಈ ದೀಕ್ಷಾಗುರುವೇ ಶಿಷ್ಯನಿಗೆ ಬೋಧಕನು, ಶಿಷ್ಯನ ಪ್ರಶ್ನೆಗಳಿಗೆ ಉತ್ತರಿಸುವವನು, ವೇದೋಪನಿಷದಾದಿ ಶಿಕ್ಷಣಕಾರಣನೂ ಆಗಿ ಶಿಕ್ಷಾಗುರುವೆಂದು ಕರೆಸಿಕೊಳ್ಳುತ್ತಾನೆ. ಆದ್ದರಿಂದ ಗುರುವು ಲಿಂಗಪೂಜಾ, ಮಂತ್ರಜಪ ಇತ್ಯಾದಿಗಳನ್ನು ಉಪದೇಶಿಸುವುದರಿಂದ ಶಿಕ್ಷಾಗುರುವೆಂದೆನಿಸಿಕೊಳ್ಳುತ್ತಾನೆ. ಶ್ರೀ ಸಿದ್ಧಾಂತ ಶಿಖಾಮಣಿಯ ಪ್ರಕಾರ ಜ್ಞಾನಗುರುವೆಂದರೆ 

   ಉಪದೇಷ್ಟೋಪದೇಶಾನಾಂ ಸಂಶಯಚ್ಚೇದಕಾರಕಃ |

    ಸಮ್ಯಗ್ ಜ್ಞಾನಪ್ರದಃ ಸಾಕ್ಷಾದೇಷ ಜ್ಞಾನಗುರುಃ ಸ್ಮೃತಃ ||

“ಉಪದೇಶಯೋಗ್ಯವಾದ ವೇದಾಂತವಾಕ್ಯ ರಹಸ್ಯಾರ್ಥಗಳನ್ನು ಉಪದೇಶಿಸುವವನೂ, ಶಿಷ್ಯರ ಸಂದೇಹಗಳನ್ನು ನಿವಾರಿಸುವವನೂ ಆದ ಶಿಕ್ಷಾಗುರುವೇ ಜ್ಞಾನವನ್ನು ಚೆನ್ನಾಗಿ ಅನುಗ್ರಹಿಸುವುದರಿಂದ ‘ಜ್ಞಾನಗುರುವೆಂದೆನಿಸಿಕೊಳ್ಳುತ್ತಾನೆ’. ‘ಜ್ಞಾನಗುರುವನ್ನು’ ಮೋಕ್ಷಾಗುರುವೆಂದೂ ಸಂಬೋಧಿಸುವುದುಂಟು. ಈ ಪ್ರಕಾರ ಒಬ್ಬನೇ ಗುರು ದೀಕ್ಷೆಯನ್ನು ಅನುಗ್ರಹಿಸುವುದರಿಂದ ದೀಕ್ಷಾಗುರು, ಶಾಸ್ತ್ರಗಳನ್ನು ಬೋಧಿಸುವುದರಿಂದ ಶಿಕ್ಷಾಗುರು ಮತ್ತು ತತ್ವಜ್ಞಾನವನ್ನು ಅನುಗ್ರಹಿಸುವುದರಿಂದ ಜ್ಞಾನಗುರುವೆಂದು ಕರೆಯಲ್ಪಡುತ್ತಾನೆ. ಈ ತ್ರಿವಿಧ ಕಾರ್ಯಗಳನ್ನು ನಿರ್ವಹಿಸುವ ಕಾರಣದಿಂದ ಗುರುವನ್ನು ಸಾಕ್ಷಾತ್ ಶಿವನೆಂದು ಶ್ರೀ ಸಿದ್ಧಾಂತ ಶಿಖಾಮಣಿಯು ಹೀಗೆ ಸಾರಿದೆ –

  ಅಪ್ರತ್ಯಕ್ಷೋ  ಮಹಾದೇವಃ ಸರ್ವೇಷಾಮಾತ್ಮಮಾಯೆಯಾ |

  ಪ್ರತ್ಯಕ್ಷೋ ಗುರುರೂಪೇಣ ವರ್ತತೇ ಭಕ್ತಿಸಿದ್ಧಯೇ ||

“ತನ್ನ ಮಾಯೆಯ ಕಾರಣದಿಂದ ಮಹಾದೇವನು ಎಲ್ಲರಿಗೂ ಕಾಣಿಸುವುದಿಲ್ಲ, ಆದರೆ ಭಕ್ತಿಯ ಸಿದ್ಧಿಗಾಗಿ ಅವನೇ ಗುರುರೂಪದಲ್ಲಿ ಪ್ರತ್ಯಕ್ಷನಾಗಿದ್ದಾನೆ. ಆದ್ದರಿಂದ ಗುರುಪೂಜೆಯೇ ಶಿವಪೂಜೆಯಾಗಿದೆ. ಶಿವ-ಗುರು ಇಬ್ಬರೂ ಒಂದೇ ಸ್ವರೂಪಿಗಳಾಗಿರುವುದರಿಂದ ಅವರಲ್ಲಿ ಸ್ವಲ್ಪವೂ ಭೇದವಿಲ್ಲವೆಂದು ಶ್ರೀ ಸಿದ್ಧಾಂತ ಶಿಖಾಮಣಿಯ ಈ ಶ್ಲೋಕದಲ್ಲಿ ಸ್ಪಷ್ಟಪಡಿಸಲಾಗಿದೆ –

  ಗುರೋರಭ್ಯರ್ಚನಾದೇವ ಸಾಕ್ಷಾದಭ್ಯರ್ಚಿತಃ  ಶಿವಃ |

  ನಸ್ತಿ ಭೇದಸ್ತಯೋಃ ಕಶ್ಚಿದೇಕತ್ವಾತ್  ತತ್ವರೂಪತಃ ||

ಶಿವಾಗಮಗಳಲ್ಲಿ ಮತ್ತು ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ ಗುರುವಿನ ಲಕ್ಷಣ ಏಕರೂಪವಾಗಿದೆ. ಅಂತೆಯೇ ಗುರುವೆಂದರೆ ‘ಗುರುತರವಾದ ಜವಾಬ್ದಾರಿಯನ್ನು ರೂವಾರಿಯಂತೆ ಹೊತ್ತು ನಿಂತವನೆನ್ನಬಹುದು’ ಹೀಗಾಗಿಯೇ ವೀರಶೈವರು ‘ಗುರುವೆನ್ನ ಮೊದಲ ಆವರಣವೆನ್ನುವರು’.

ವಿಷಯ ಸಂಗ್ರಹಣೆ –

೧. ಅಷ್ಟಾವರಣ ವಿಜ್ಞಾನ ೨. ಶೈವಾಗಮಗಳು ಮತ್ತು ಶ್ರೀ ಸಿದ್ಧಾಂತ ಶಿಖಾಮಣಿ

Someshwar Gurumath

Someshwar Gurumath is an author, filmmaker, poet, songwriter, and public speaker from Hubli, Karnataka. He has a BSc in Visual Media and is currently pursuing PG Diploma in Public leadership at the Rashtram School of Public Leadership, Rishihood University. He has published two books so far, titled Nanu Nanna Jagattu and Payanigana Kavyagalu, both of which are anthologies of his poems. Through his writings and filmmaking, he aspires to bring about a unified cultural consciousness and motivate people to work towards the renaissance of Bhārata.

0 Reviews

Related post