ವೀರಶೈವ ದರ್ಶನ : ಅರ್ಥಾತ್ “ಶಕ್ತಿ ವಿಶಿಷ್ಟಾದ್ವೈತ” ಸಿದ್ಧಾಂತದ ವೇದೋಕ್ತತೆ

 ವೀರಶೈವ ದರ್ಶನ : ಅರ್ಥಾತ್ “ಶಕ್ತಿ ವಿಶಿಷ್ಟಾದ್ವೈತ” ಸಿದ್ಧಾಂತದ ವೇದೋಕ್ತತೆ

ವೀರಶೈವಮತವು ಅತ್ಯಂತ ಪ್ರಾಚೀನವಾದ ಭಾರತೀಯ ದಾರ್ಶನಿಕ ಪರಂಪರೆಯಲ್ಲೊಂದು. ಇತರೆ ಶೈವಧರ್ಮದ ಪ್ರಭೇದಗಳಂತೆಯೇ ತನ್ನದೇ ಆದ ವಿಶೇಷ ತತ್ವಾಚರಣೆಗಳಿಂದ ಶ್ರೇಷ್ಠವಾಗಿದೆ. ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲದಂಥಹ ವಿಶಿಷ್ಟವಾದ ಸಾಧನಾಮಾರ್ಗಗಳಿಂದ ಕೂಡಿದೆ. ತಮ್ಮ ಶರೀರದ ಮೇಲೆ ಧರಿಸುವ ಇಷ್ಟಲಿಂಗದ ತಾತ್ವಿಕತೆಯಿಂದ ವೀರಶೈವರು ವಿಭಿನ್ನರಾಗಿ ಮತ್ತು ವಿಶೇಷವಾಗಿ ನಿಲ್ಲುತ್ತಾರೆ. ಶರೀರದ ಮೇಲಿನ ಪರಮಾತ್ಮಸ್ವರೂಪವಾದ ಇಷ್ಟಲಿಂಗಧಾರಣೆ , ಹಸ್ತ ಪೀಠದ ಮೇಲೆ ಇಷ್ಟಲಿಂಗವನ್ನಿರಿಸಿ ಪೂಜಿಸುವ ಪದ್ದತಿಗಳು ಯುಗಯುಗಾಂತರಗಳ ಐತಿಹಾಸಿಕತೆಯನ್ನು ಪ್ರತಿನಿಧಿಸುತ್ತವೆ. ಅಷ್ಟೇ ಅಲ್ಲದೆ ವೇದ, ಆಗಮ, ಪುರಾಣ ಮತ್ತು ಇತಿಹಾಸಗಳ ಪುಟಗಳೂ ಸಹ ಸಾಕ್ಷಿಯಾಗಿ ನಿಲ್ಲುತ್ತವೆ.

ಋಗ್ವೇದದಲ್ಲಿ –  ಅಯಂ ಮೇ ಹಸ್ತೋ ಭಗವಾನಯಂ ಮೇ ಭಗವತ್ತರಃ |

                        ಅಯಂ ಮೇ ವಿಶ್ವಭೇಷಜೋಯಂ ಶಿವಾಭಿಮಮರ್ಷನಃ |

                        ಅಯಂ ಮಾತಾಯಂ ಪಿತಾಯಂ ಜೀವಾತುರಾಗಮತ್ |

                         ಇದಂ ತವ ಪ್ರಸರ್ಪಣಂ ಸಂಬಂಧವೇಹಿ ನಿರೀಹಿ ||

“ಈ ಹಸ್ತದಲ್ಲಿರುವ ಲಿಂಗದೇವನೇ ಪೂಜ್ಯನಾದ ರುದ್ರದೇವನಾಗಿರುವನು. ಇವನು ದೇವತೆಗಳಲ್ಲಿ ಶ್ರೇಷ್ಠನು, ಚರಾಚರ ವಿಶ್ವಕ್ಕೆ ಇವನೇ ವೈದ್ಯನು. ಈ ಪವಿತ್ರ ಲಿಂಗವೇ ನನ್ನ ಹಾಗೂ ಪರಶಿವನ ಮಧ್ಯೆ ಸಂಪರ್ಕವನ್ನೇರ್ಪಡಿಸುವುದು. ಈತನೇ ನನ್ನ ತಾಯಿ, ತಂದೆ ಹಾಗೂ ಜೀವನದ ದಿವ್ಯ ಔಷಧವಾಗಿ ನನ್ನ ಹಸ್ತದಲ್ಲಿ ಪ್ರತಿಷ್ಠಾಪಿತಗೊಂಡಿದ್ದಾನೆ. ಹೇ ಬಂಧುವೇ ನೀನು ನನ್ನಲ್ಲಿ ಒಂದಾಗು ಎಂಬುದೇ ನನ್ನ ಪ್ರಾರ್ಥನೆ” ಎಂದು ಹೇಳಿದೆ.

ಋಗ್ವೇದದ ಇನ್ನೊಂದು ಮಂತ್ರದಲ್ಲಿ ಲಿಂಗಧಾರಣೆಯ ಮಹತ್ವವನ್ನು ಹೇಳಿದೆ.

 “ಪವಿತ್ರಂ ತೇ ವಿತತಂ ಬ್ರಹ್ಮಣಸ್ಪತೇ ಪ್ರಭುರ್ಗಾತ್ರಾಣಿ ಪರ್ಯೇಶಿ  ವಿಶ್ವತಃ |

 ಅತಪ್ತತನೂರ್ನ ತದಾಮೋ ಅಶ್ನುತೇ ಶ್ರುತಾಸ ಇದ್ವಹಂತಸ್ತತ್ಸಮಾಶತೇ ||”

ಬ್ರಹ್ಮವೆಂದರೆ ಲಿಂಗವು, ಅದರ ಸಂಪರ್ಕದಿಂದ ಶರೀರವು ಪವಿತ್ರವಾಗುವುದು ಮತ್ತು ಸರ್ವಾವಸ್ಥೆಗಳಲ್ಲಿಯೂ ದೇಹವನ್ನು  ಶುದ್ಧಗೊಳಿಸಲು ಸಹಾಯಕವಾಗುವುದು. ದೀಕ್ಷಾಗ್ನಿಯಿಂದ ದೇಹವನ್ನು ದಹಿಸದೇ ಈ ಲಿಂಗವು ಪ್ರಾಪ್ತವಾಗದು. ದೀಕ್ಷಾವಿಹೀನನು ‘ಆಮ’ ಅಶುದ್ಧನೆಂದೆನಿಸುವನು. ಅಂಥವನು ಸದ್ಗತಿಯನ್ನು ಹೊಂದಲಾರನೆಂಬುದು ಈ ಮಂತ್ರದ ತಾತ್ಪರ್ಯ.  

ಯಜುರ್ವೇದದ ಶತರುದ್ರೀಯದಲ್ಲಿ –

   “ಯಾ ತೇ ರುದ್ರ ಶಿವಾ ತನೂರಘೋರಾಪಾಪಕಾಶಿನಿ |

   ತಯಾ ನಸ್ತನುವಾ ಶಂತಮಯಾ ಗಿರಿಶಂತಾಭಿಚಾಕಶೀಹಿ” ||

ಸಂಸಾರದಿಂದುಂಟಾದ ಕ್ಲೇಶವನ್ನು ದೂರಗೊಳಿಸುವ ನಿನ್ನ ಲಿಂಗರೂಪಿ ಶರೀರವು ಶಾಂತವೂ ಮಂಗಲಪ್ರದವೂ ಆಗಿರುವುದು, ಅದು ಪಾಪರಹಿತರಾದ  ಭಕ್ತರಲ್ಲಿ ಅಂದರೆ ಶಿವಭಕ್ತರ ಶರೀರದಲ್ಲಿ ಧಾರಣೆಯಿಂದ ಸದಾಕಾಲವೂ ಪ್ರಕಾಶಿಸುತ್ತಾನೆ ಎಂದರ್ಥ.

ಯಜುರ್ವೇದದ ಲಿಂಗಧಾರಣಪರವಾದ ಮಂತ್ರಾರ್ಥದ ಉಲ್ಲೇಖವನ್ನು ವಾತುಲಾಗಮದಲ್ಲಿ ಕಾಣಬಹುದಾಗಿದೆ.

” ಅಘೋರಾ ಪಾಪನಾಶಿನೀ ಯಾ ತೇ ರುದ್ರ ಶಿವಾತನೂಃ |

  ಯಜುಷಾ ಗೀಯತೇ ಯಸ್ಮಾತ್ತಸ್ಮಾಚೈವೋಘವರ್ಜಿತಃ |

ಕಾಯಶುದ್ಧಿಶ್ಚಾತ್ಮಶುದ್ಧಿಶ್ಚಾಂಗನ್ಯಾಸಃ ಕರಸ್ಯ ಚ |

 ಸರ್ವಶುದ್ಧಿರ್ಭವೇನ್ನಿತ್ಯಂ ಲಿಂಗಧಾರಣಮೇವ ಚ ||

ಹೇ ರುದ್ರನೇ! ನಿನ್ನ ಶುಭಕರವಾದ ಶರೀರವು ಅಘೋರವೂ ಪಾಪನಾಶಿನಿಯು ಆಗಿದೆಯೆಂದು ಹೊಗಳುವುದರ ಮೂಲಕ ‘ಯಜುರ್ವೇದವು ಶಿವಸಂಬಂಧವಾಗಿ ಪಾಪರಹಿತವಾಗಿದೆ’. ಶರೀರಶುದ್ಧಿ, ಆತ್ಮಶುದ್ಧಿ, ಅಂಗನ್ಯಾಸ, ಕರನ್ಯಾಸ ಹಾಗೂ ಸರ್ವಪ್ರಕಾರದ ಶುದ್ಧಿಯೂ, ನಿತ್ಯಲಿಂಗಧಾರಣೆಯು ಶರೀರದಲ್ಲಿ ಸಂಭವಿಸುತ್ತದೆ” ಎಂದು ಹೇಳಿದೆ.

ಸಾಮವೇದದ ಸದಾನಂದೋಪನಿಷತ್ತಿನಲ್ಲಿ –

“ನಮೋ ಬ್ರಹ್ಮಣೇ ಧಾರಣಂ ಮೇ ಅಸ್ತ್ವನಿರಾಕರಣಂ ಧಾರಯಿತಾ ಭೂಯಾಸಂ ಕರ್ಣಯೋಃ ಶ್ರುತಂ ಮಾಚ್ಯೋದ್ವಾಂ ಮಮಾಯುಷ್ಯ ಓಂ||

‘ಅಂತರ್ಲಿಂಗಧಾರಣದಲ್ಲಿ ಶಕ್ತನಾಗಿರಲಿ ಅಶಕ್ತನಾಗಿರಲಿ ವಿಪ್ರೋತ್ತಮನು ತನ್ನ ಉರಸ್ಥಲದಲ್ಲಿ ಲಿಂಗಧಾರಣವನ್ನ ಮಾಡಬೇಕು’ ಎಂದು ಹೇಳಿದೆ.

ಅಥರ್ವಣವೇದದಲ್ಲಿ –

“ಅಂತರ್ಧಾರಣಶಕ್ತೋವಾ ಹ್ಯಶಕ್ತೋ ವಾ ದ್ವಿಜೋತ್ತಮಃ |

ಸಂಸ್ಕೃತ್ಯ ಗುರುಣಾ ದತ್ತಂ ಶೈವಂ ಲಿಂಗಮುರಸ್ಥಲೇ || 

ಸರ್ವದೇವತೆಗಳು , ಋಷಿಮುನಿಗಳು , ದೇವ ದಾನವರು ಕೂಡ ಲಿಂಗಧಾರಿಗಳಾಗಿದ್ದರು ಎಂಬ ಸ್ಪಷ್ಟ ಪ್ರಮಾಣವು ಈ ಮಂತ್ರದಿಂದ ದೊರೆಯುತ್ತದೆ.

ಇದೇ ವೇದದ ಐಶ್ವರ್ಯ ಶಾಖೆಯಲ್ಲಿ –

“ಯೋ ವಾಮಹಸ್ತಾರ್ಚಿತ ಲಿಂಗಮೇಕಂ ಪರಾತ್ಪರಂ ಧಾರಯತೇ ಸತತಂ ವಿಪ್ರಃ ಕ್ಷತ್ರಿಯೋ ವಾ | ತಸ್ಯೈವ ಲಭ್ಯಃ ಪರಮೇಶ್ವರೋಸೌ  ನಿರಂಜನಃ ಪರಮಂ ಸಾಮ್ಯಮುಪೈತಿ ದಿವ್ಯಮ್ ||”

“ಬ್ರಾಹ್ಮಣನಾಗಲಿ ಕ್ಷತ್ರಿಯನಾಗಲಿ ತನ್ನ ವಾಮಹಸ್ತದಲ್ಲಿ ಪರವಸ್ತುಸ್ವರೂಪವಾದ ಲಿಂಗವನ್ನಿರಿಸಿಕೊಂಡು ಅರ್ಚಿಸುತ್ತಾನೋ, ಅದನ್ನು ಸತತವಾಗಿ ಶರೀರದ ಮೇಲೆ ಧರಿಸಿಕೊಂಡಿರುತ್ತಾನೋ ಅಂಥವನಿಗೆ ಪರಶಿವನು ಲಭ್ಯನಾಗುವನು ಮತ್ತು ಅಂಥವನೇ ದಿವ್ಯಪ್ರಕಾಶವುಳ್ಳವನು, ನಿರಂಜನನೂ ಆದ ಪರಮೇಶ್ವರನೊಂದಿಗೆ ಸಾಮ್ಯವನ್ನು ಹೊಂದುವನು” ಎಂದು ಹೇಳಿದೆ.

ಈ ವೇದ ವಾಕ್ಯಗಳನ್ನು ಸಮರ್ಥಿಸುತ್ತ ಚೆನ್ನಬಸವಣ್ಣನು  ಹೀಗೆ ಹೇಳಿದ್ದಾನೆ –

ಶ್ರುತಿ ಪುರಾಣಾಗಮ ಇತಿಹಾಸಗಳಿಂದ ಶಿವನೇ ಅಧಿಕನೆಂದರಿದು,

ಸಕಲ ಋಷಿಜನಂಗಳು ದೇವರ್ಕಳು,

ರತ್ನ ಸುವರ್ಣ ರಜತ ತಾಮ್ರ ಚಂದ್ರಕಾಂತ ಸ್ಪಟಿಕ,

ಪವಳದ ಲಿಂಗಂಗಳನಾರಾಧಿಸಿ:

ಅಗಸ್ತ್ಯ ದಧೀಚಿ ಕಣಾದ ಬಾಣಾಸುರ ಪುರಂದರ ಬ್ರಹ್ಮ ವಿಷ್ಣು

ದುರ್ವಾಸ ನಂದಿಕೇಶ್ವರ ಸ್ಕಂದ ಭೃಂಗಿ ರಿಟಿ

ವೀರಭದ್ರ ಪ್ರಮಥಾದಿ ಗಣಂಗಳೆಲ್ಲರೂ

ಶಿವನ ಪೂಜಿಸಿ ಮಹದೈಶ್ವರ್ಯಪದಂಗಳ ಪಡೆದರು,

ಅದೆಂತೆಂದಡೆ, ಆದಿತ್ಯೇ –

“ರುದ್ರೇಣ ದೀಕ್ಷಿತೋ ಭೂತ್ವಾ ಸ್ಕಂದಃ ಶಿವಸಮೋಭವೇತ್|”

ಶಿವರಹಸ್ಯೆೇ –

“ಪಾತ್ರತಾಂ ಪ್ರಥಮಂ ಗತಃ”

ಇದನರಿದು ಪರಶುರಾಮ ಪರಾಶರ ವಸಿಷ್ಠ ವಾಲ್ಮೀಕಿ ಕಮಲಾಕರ

ವಿಶ್ವಾಮಿತ್ರಾದಿ ಮಹಾಮುನಿಗಳೆಲ್ಲರೂ,

ಶಿವಲಿಂಗವ ಧರಿಸಿಕೊಂಡು ಶಿವಲಿಂಗಾರ್ಚನೆಯ ಮಾಡಿಕೊಂಡು

ಪಾದತೀರ್ಥಪ್ರಸಾದವ ಕೊಂಡು ಮುಕ್ತರಾದರು.

ಅದು ಹೇಗೆಂದರೆ ಶಿವಧರ್ಮೇ –

“ಪಾಣಿನಿಶ್ಚ ಕಣಾದಶ್ಚ ಕಪಿಲೋ ಗೌತಮಾದಯಃ |

ಪ್ರಸಾದಸೇವನಾದ್ಧ್ಯಾನಾದ್ಧಾರಣಾದರ್ಚನಾದಪಿ||”

ಇದು ಕಾರಣ ಕೂಡಲಚೆನ್ನಸಂಗದೇವರ ಪೂಜಿಸಿ

ಪಾದೋದಕ ಪ್ರಸಾದವ ಕೊಂಡು ಅತ್ಯಂತ ಶುದ್ದರಾದರು

ಎಲ್ಲಾ ದೇವತೆಗಳು, ಎಲ್ಲಾ ಋಷಿಜನಂಗಳು.

 ಹೀಗೆ ವೇದಗಳು, ಹಲವಾರು ಮಂತ್ರಗಳಲ್ಲಿ ಶರೀರದ ಮೇಲೆ ಲಿಂಗಧಾರಣೆಯನ್ನು ಬೋಧಿಸುತ್ತವೆ. ವೀರಶೈವಪರವಾದ ರುದ್ರ, ಶಿವ, ಪತಿ, ಪಶು, ಭಸ್ಮ, ರುದ್ರಾಕ್ಷ, ಮಂತ್ರ ಮುಂತಾದ ಹಲವಾರು ವಿಷಯಗಳು ನಾಲ್ಕೂ ವೇದಗಳಲ್ಲಿ ನಿರೂಪಿಸಲ್ಪಟ್ಟಿವೆ. ವೀರಶೈವವು ವೇದೋಕ್ತವಾಗಿದೆ ಎಂಬುದಕ್ಕೆ ನಂತರದ ಹಲವಾರು ವೀರಶೈವ ಶಾಸ್ತ್ರ, ಸಿದ್ಧಾಂತ ಗ್ರಂಥಗಳಲ್ಲಿ ಪುರಾವೆಗಳನ್ನು ಕಾಣಬಹುದಾಗಿದೆ. ಹೀಗೆಯೇ ಶೈವಧರ್ಮದ ಪ್ರಮುಖ ಶಾಖೆಯಾದ ವೀರಶೈವವು ತನ್ನದೇ ಆದ ಆಚಾರ ವಿಚಾರಗಳನ್ನು ಒಳಗೊಂಡ ಒಂದು ಸ್ವತಂತ್ರ ಮತವಾಗಿದ್ದು “ಶಕ್ತಿ ವಿಶಿಷ್ಟಾದ್ವೈತ” ಸಿದ್ಧಾಂತವೆಂದು ಪ್ರಸಿದ್ಧವಾಗಿದೆ.

ವಿಷಯ ಸಂಗ್ರಹಣೆ –

೧. “ಶಿವಾಗಮಗಳು ಮತ್ತು ವಚನಸಾಹಿತ್ಯ ಒಂದು ವಿಮರ್ಶಾತ್ಮಕ ಅಧ್ಯಯನ”

೨. ಶಕ್ತಿವಿಶಿಷ್ಟಾದ್ವೈತ ತತ್ವತ್ರಯ ವಿಮರ್ಶೆ

Someshwar Gurumath

Someshwar Gurumath is an author, filmmaker, poet, songwriter, and public speaker from Hubli, Karnataka. He has a BSc in Visual Media and is currently pursuing PG Diploma in Public leadership at the Rashtram School of Public Leadership, Rishihood University. He has published two books so far, titled Nanu Nanna Jagattu and Payanigana Kavyagalu, both of which are anthologies of his poems. Through his writings and filmmaking, he aspires to bring about a unified cultural consciousness and motivate people to work towards the renaissance of Bhārata.

0 Reviews

Related post