ವೀರಶೈವದರ್ಶನದ ಆಗಮಮೂಲಕತ್ವ

 ವೀರಶೈವದರ್ಶನದ ಆಗಮಮೂಲಕತ್ವ

 “ಶೈವತಂತ್ರಮಿತಿ ಪ್ರೋಕ್ತಮ್ ಸಿದ್ಧಾಂತಾಖ್ಯಂ ಶಿವೋದಿತಂ|

  ಸರ್ವವೇದಾರ್ಥ ರೂಪತ್ವಾತ್ ಪ್ರಾಮಾಣ್ಯಂ ವೇದವತ್ ಸದಾ ||

  ವೇದಧರ್ಮಾಭಿಧಾಯಿತ್ವಾತ್ ಸಿದ್ಧಾಂತಾಖ್ಯಃ ಶಿವಾಗಮಃ|

 ವೇದಬಾಹ್ಯಾವಿರೋಧಿತ್ವಾದ್ ವೇದಸಮ್ಮತ ಉಚ್ಯತೇ ||

 ವೇದಸಿದ್ಧಾಂತಯೋರೈಕ್ಯಮೇಕಾರ್ಥಪ್ರತಿಪಾದನಾತ್ |

 ಪ್ರಾಮಾಣ್ಯಂ ಸದೃಶಂ ಜ್ಞೇಯಂ ಪಂಡಿತೈರೇತಯೋಃ ಸದಾ ||  

 ಸಿದ್ಧಾಂತಾಖ್ಯೇ ಮಹಾತಂತ್ರೇ ಕಾಮಿಕಾದ್ಯೇ ಶಿವೋದಿತೇ|

ನಿರ್ದಿಷ್ಟಮುತ್ತರೇಭಾಗೇ ವೀರಶೈವಮತಂ ಪರಂ ||” 

ಮಹರ್ಷಿ ಅಗಸ್ತ್ಯ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ ನಡುವಿನ ಸಂವಾದದ ರೂಪದಲ್ಲಿರುವ ಶ್ರೀ ಸಿದ್ಧಾಂತ ಶಿಖಾಮಣಿಯ ಈ ಶ್ಲೋಕಗಳಲ್ಲಿ ಭಸ್ಮ, ರುದ್ರಾಕ್ಷ, ಲಿಂಗಧಾರಣೆಯಂತಹ ಸಿದ್ಧಾಂತಗಳನ್ನು ಪ್ರತಿಪಾದಿಸಿರುವ ಕಾರಣಾರ್ಥವಾಗಿ ಮತ್ತು ಜೈನ, ಚಾರ್ವಾಕ, ಬೌದ್ಧ ಸಿದ್ಧಾಂತಗಳನ್ನು ನಿರಾಕರಿಸಿರುವ ಕಾರಣ ಸಿದ್ಧಾಂತಾಖ್ಯವು ಶಿವಾಗಮವೆಂದು ಮತ್ತು ವೇದಸಮ್ಮತವಾಗಿದೆಯೆಂದು ಹೇಳಬಹುದು. ಅನೇಕ ಶೈವಶಾಖೆಗಳಲ್ಲಿ ಪ್ರಧಾನವಾದ ವೀರಶೈವಮತಕ್ಕೆ ಸಿದ್ಧಾಂತಶಬ್ದವಾಚ್ಯಗಳಾದ ಇಪ್ಪಂತ್ತೆಂಟು ಶಿವಾಗಮಗಳೇ ಆಧಾರವಾಗಿವೆ.  

ವೀರಶೈವ ಶಬ್ದದ ದಾರ್ಶನಿಕ  ಅರ್ಥನಿರ್ವಚನ –

“ವಿಶಬ್ದೇನೋಚ್ಯತೇ ವಿದ್ಯಾ ಶಿವಜೀವೈಕ್ಯಬೋಧಿಕಾ |

ತಸ್ಯಾಂ ರಮಂತೇ ಯೇ ಶೈವಾ ವೀರಶೈವಾಸ್ತುತೇ ಮತಾಃ || 

ವಿದ್ಯಾಯಾಂ ಶಿವರೂಪಾಯಾಂ ವಿಶೇಷಾದ್ರಮಣಂ ಯತಃ | 

ತಸ್ಮಾದೇತೇ ಮಹಾಭಾಗ ವೀರಶೈವಾ ಇತಿ  ಸ್ಮೃತಾಃ || 

ವೇದಾಂತಜನ್ಯಂ ಯಜ್ಜ್ಞಾನಂ ವಿದ್ಯೇತಿ ಪರಿಕೀರ್ತ್ಯತೇ | 

ವಿದ್ಯಾಯಾಂ ರಮತೇ ತಸ್ಯಾಂ ವೀರ ಇತ್ಯಾಭಿಧೀಯತೇ ||” 

ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ ಬರುವ ‘ಶ್ರೀಜಗದ್ಗುರು ರೇಣುಕಾಚಾರ್ಯರಿಂದ’ ಹೇಳಲ್ಪಟ್ಟಿರುವ ಈ ಶ್ಲೋಕದ ತಾತ್ಪರ್ಯವೇನೆಂದರೆ “ವಿ” ಎಂಬ ಶಬ್ದವು ಶಿವ ಜೀವರ ಐಕ್ಯರೂಪದ ವಿದ್ಯೆಯನ್ನು ಬೋಧಿಸುತ್ತದೆ. ಅಂತಹ ವಿದ್ಯೆಯಲ್ಲಿ ಯಾರು ವಿನೋದದಿಂದ ಕ್ರೀಡಿಸುತ್ತಾರೋ ಅಥವಾ ಆನಂದವನ್ನು ಹೊಂದುತ್ತಾರೋ ಅವರೇ ವೀರಶೈವರು. ಇಷ್ಟಲಿಂಗವು ಕಳೆದುಹೋದರೆ ಮತ್ತು ವ್ರತಗಳ ಆಚರಣೆಯಲ್ಲಿ ಚ್ಯುತಿಯುಂಟಾದರೆ ತೃಣದಂತೆ ಪ್ರಾಣತ್ಯಾಗ ಮಾಡುವುದನ್ನು ಸಹ ವೀರವ್ರತವೆಂದು ಸಂಬೋಧಿಸಲ್ಪಟ್ಟಿದೆ.

ವೀರಶೈವ ಶಬ್ದದ ಧಾರ್ಮಿಕ ನಿರ್ವಚನ –

ವೀರಶೈವ ಧರ್ಮದಲ್ಲಿ ಸದ್ಗುರುವು ದೀಕ್ಷಾವಿಧಾನದ ಮೂಲಕ ಇಷ್ಟಲಿಂಗವನ್ನು ಪ್ರದಾನ ಮಾಡುವಾಗ ಜೀವನಪರ್ಯಂತವಾಗಿ ಶರೀರದ ಮೇಲೆ ಅದನ್ನು ಧರಿಸಲು ಆದೇಶಿಸುತ್ತ ಈ ರೀತಿ ಹೇಳುವರು –

‘ಪ್ರಾಣವದ್ಧಾರಣೀಯಂ ತತ್ಪ್ರಾಣಲಿಂಗಮಿದಂ ತವ|

ಕದಾಚಿತ್ ಕುತ್ರಚಿದ್ವಾಪಿ ನ ವಿಯೋಜಯ ದೇಹತಃ || (ಸಿ.ಶಿ) 

ಹೇ ಶಿಷ್ಯನೇ ನಿನಗೆ ನೀಡಲಾಗಿರುವ ಇಷ್ಟಲಿಂಗವನ್ನು  ಪ್ರಾಣಲಿಂಗವೆಂದು ಅರ್ಥೈಸಿಕೊ. ಹೇಗೆ ನಿನ್ನ ಪ್ರಾಣದ ಮೇಲೆ ನಿನಗೆ ಪ್ರೇಮವಿದೆಯೋ  ಹಾಗೆಯೇ ಈ ಶಿವಲಿಂಗದೆಡೆ ಪ್ರೇಮಭಾವವಿರಲಿ. ಎಂಥಹ ಪರಿಸ್ಥಿತಿಯಲ್ಲಿಯೂ ನಿನ್ನ ಶರೀರದಿಂದ ವಿಯೋಗಗೊಳ್ಳದಿರಲಿ. ಅಂತೆಯೇ ಯಾವ ವ್ಯಕ್ತಿಯು ಗುರುವಿನ ಈ ಉಪದೇಶದ ಅನುಸಾರವಾಗಿ ನಡೆದುಕೊಳ್ಳುತ್ತಾನೋ ಮತ್ತು ಇಷ್ಟಲಿಂಗವೇನಾದರೂ ಶರೀರದಿಂದ ವಿಯೋಗಗೊಂಡರೆ ತನ್ನ ಪ್ರಾಣತ್ಯಾಗಕ್ಕೂ ಸಿದ್ಧನಾಗಿರುವಂತೆ ವೀರವ್ರತದ ಪರಿಪಾಲನೆಯನ್ನು ಕೈಗೊಳ್ಳುತ್ತಾನೋ ಅವನೇ ವೀರಶೈವನೆಂದು ಕರೆಸಿಕೊಳ್ಳುತ್ತಾನೆ.

“ಇಷ್ಟಲಿಂಗವಿಯೋಗೇ ವಾ ವ್ರತಾನಾಂ ವಾ ಪರಿಚ್ಯುತೌ।

ತೃಣವತ್ ಪ್ರಾಣಸಂತ್ಯಾಗ ಇತಿ ವೀರವ್ರತಂ ಮತಂ || 

ಭಕ್ತ್ಯುತ್ಸಾಹವಿಶೇಷೋಪಿ ವೀರತ್ವಮಿತಿ ಕಥ್ಯತೇ | 

ವೀರವ್ರತಸಮಾಯೋಗಾದ್ ವೀರಶೈವಂ ಪ್ರಕೀರ್ತಿತಂ|| (ಕ್ರಿಯಾಪಾದ. ಚಂದ್ರ.ಆ.) 

ಮೇಲಿನ ಭಾವವನ್ನೇ ಆಗಮದ ಈ ವಚನದಲ್ಲಿಯೂ ಸ್ಪಷ್ಟಪಡಿಸಲಾಗಿದೆ.

“ವೀರಶ್ಚಾಸೌ ಶೈವಶ್ಚ ವೀರಶೈವಃ” ವೆಂಬ ವ್ಯುತ್ಪತ್ತಿಯ ಮೂಲಕವೂ ಶಿವನಿಗೆ ಪ್ರತಿಯಾಗಿ ಇರುವಂತಹ ಭಕ್ತಿಯ ಪರಾಕಾಷ್ಠತೆಯನ್ನು ನಾವಿಲ್ಲಿ ಕಾಣಬಹುದು. ಇಲ್ಲಿ ಉಲ್ಲೇಖಿಸಲಾಗಿರುವ ವೀರತ್ವವನ್ನು ನಾವು ಭಕ್ತ್ಯುತ್ಸಾಹವೆಂಬ ದೃಷ್ಟಿಯಲ್ಲಿ ನೋಡಬೇಕೆ ವಿನಹ ಬಲಪ್ರಯುಕ್ತವಾಗಲ್ಲ. ಷಡಕ್ಷರಿ ಮಂತ್ರದಲ್ಲಿ ಹೇಳಿರುವಂತೆ  – “ವೀರತ್ವಮಸ್ಯ ನ ಧನೇನ ವಾ ಬಲೇನ ನೋ ಕಾರ್ಯಶ್ಚ ವಿಹಿತಂ ದೃಢಶಂಭುಭಕ್ತ್ಯಾ| 

ವೀರಸ್ತುರೀಯ ಇತಿ ಶಂಕರಭಾಷಣೇನ ಶ್ರೀ ವೀರಶೈವಮತಗಾನ್ನ ಪರೋಸ್ತೀ ಕಶ್ಚಿತ್ ||”  (ವಿ.ಧರ್ಮ.ಶಿರೋ)

ಯುದ್ಧಭೂಮಿಯಲ್ಲಿ ವೀರಯೋಧನು ತನ್ನ ಸ್ವಾಮಿಗೆ ಪ್ರತಿಯಾಗಿ ನಿಷ್ಠೆಯಿಂದ ನಡೆದುಕೊಂಡು ಅತ್ಯಂತ ಶ್ರದ್ಧಾಪೂರ್ವಕವಾಗಿ ಹೇಗೆ ಪ್ರಾಣತ್ಯಾಗವನ್ನು ಮಾಡುವನೋ ಹಾಗೆಯೇ ಶಿವಭಕ್ತನೂ ಕೂಡ ತನ್ನ ಶರೀರದ ಮೇಲಿರುವ ಮಮತ್ವ ಬುದ್ಧಿಯನ್ನು ತ್ಯಾಗ ಮಾಡಿ ಪ್ರಸಂಗಬಂದರೆ ಪ್ರಾಣತ್ಯಾಗವನ್ನು ಮಾಡುವನು. ಇನ್ನು ನೀಲಕಂಠ ಶಿವಾಚಾರ್ಯರೇ ಹೇಳಿದಂತೆ – 

‘ವಿಶಬ್ದೋ ವಾ ವಿಕಲ್ಪಾರ್ಥ ರಶಬ್ದೋ ರಹಿತಾರ್ಥಕಃ |

ವಿಕಲ್ಪರಹಿತಂ ಶೈವಂ ವೀರಶೈವಂ ಪ್ರಚಕ್ಷತೇ || (ಕ್ರಿಯಾಸಾರ) 

ಸ್ಕಂದಪುರಾಣದ ಶಂಕರ ಸಂಹಿತೆಯಲ್ಲಿಯೂ  

”   ಯೋ ಹಸ್ತ ಪೀಠೇ ನಿಜಮಿಷ್ಟಲಿಂಗಮ್

   ವಿನ್ಯಸ್ಯ ತಲ್ಲೀನಮನಃ ಪ್ರಚಾರಃ |

  ಬಾಹ್ಯಕ್ರಿಯಾಸಂಕುಲನಿಸ್ಪೃಹಾತ್ಮಾ

  ಸಂಪೂಜಯತ್ಯಂಗ ಸ ವೀರಶೈವಃ||

ಯಾವ ವ್ಯಕ್ತಿಯು ತನ್ನ ಕರಪೀಠದಲ್ಲಿ ಇಷ್ಟಲಿಂಗವನ್ನಿರಿಸಿಕೊಂಡು ಅರ್ಚನಾ ವಿಧಿಯನ್ನು ಸಂಪನ್ನಗೊಳಿಸಿ ಅದರಲ್ಲೇ ಅನುರಕ್ತಗೊಳ್ಳುವನೋ ಅಂಥವನನ್ನು ವೀರಶೈವನೆಂದು ಕರೆದರು. ಅರ್ಥಾತ್ ಇಷ್ಟಲಿಂಗಪೂಜಾವಿಧಾನದ ಪ್ರಾಚೀನತೆಯನ್ನು ನಾವಿಲ್ಲಿ ಅರಿಯಬಹುದು. ಈ ಪ್ರಕಾರವಾಗಿ ಇಷ್ಟಲಿಂಗ ಧಾರಣೆಯನ್ನು ರೂಢಿಸಿಕೊಂಡಿರುವ ಶಿವಭಕ್ತನು ತನ್ನ ಲೌಕಿಕ ಮತ್ತು ಪಾರಮಾರ್ಥಿಕ ವ್ಯವಹಾರದಲ್ಲಿ ಇತರರಿಗಿಂತ ಭಿನ್ನನು ಹಾಗೂ ವಿಲಕ್ಷಣನು ಆಗಿರುತ್ತಾನೆ. ಈ ವಿಲಕ್ಷಣದ ಆಚಾರದ ಕಾರಣವಾಗಿಯೂ ಇವರನ್ನು ವೀರಶೈವರೆಂದು ಕರೆಯುತ್ತಾರೆ.

ವಾತುಲಶುದ್ಧಾಖ್ಯತಂತ್ರದ – 

 “ವಿಶಿಷ್ಟ ಈರ್ಯತೆ ಯಸ್ಮಾದ್ ವೀರ್ಯ ಇತ್ಯಭಿಧೀಯತೇ |

 ಶಿವೇನ ಸಹ ಸಂಬಂಧಂ ಶೈವಮಿತ್ಯಾದ್ರುತಂ ಬುಧೈಹಿ ||

  ಉಭಯೋಹ್ ಸಂಪುಟೀಭಾವಾದ್ ವೀರಶೈವಮಿತಿ ಸ್ಮೃತಂ |

 ಶಿವಾಯಾರ್ಪಿತಜೀವತ್ವಾದ್ ವೀರತಂತ್ರಸಮುದ್ಭವಾತ್||

  ವೀರಶೈವಸಮಾಯೋಗಾದ್ ವೀರಶೈವಮಿತಿ ಸ್ಮೃತಂ ||”

ಈ ವಚನದಲ್ಲಿ   “ವಿಶಿಷ್ಟ ಈರ್ಯತೆ ಇತಿ ವೀರಃ” ಎಂದು ವೀರ ಶಬ್ದದ ವ್ಯುತ್ಪತ್ತಿಯನ್ನು ಸಂಬೋಧಿಸಿ ಆ ರೀತಿಯ ವಿಶಿಷ್ಟ ಆಚಾರವುಳ್ಳ  ಶೈವನನ್ನೇ ವೀರಶೈವನೆಂದು ಕರೆದಿದ್ದಾರೆ. ಶ್ರೀ ನೀಲಕಂಠ ಶಿವಾಚಾರ್ಯರು ಕ್ರಿಯಾಸಾರದ –

“ವಿರೋಧಾರ್ಥೋ ವಿಶಬ್ದಃ ಸ್ಯಾದ್ರಶಬ್ದೋ ರಹಿತಾರ್ಥಕಃ |

 ವಿರೋಧರಹಿತಂ ಶೈವಂ ವೀರಶೈವಂ ವಿದುರ್ಬುಧಾಃ|| ”

ಈ ವಚನದಲ್ಲಿ ವೀರಶೈವ ಶಬ್ದದ ವ್ಯುತ್ಪತ್ತಿಯನ್ನು ‘ವಿರೋಧರಹಿತಾರ್ಥವಾಗಿ’ ಸಂಬೋಧಿಸಿ ವೀರಶೈವರ ಸರ್ವಲೋಕಾನುರಾಗಿತ್ವವನ್ನು ಸಿದ್ಧಿಗೊಳಿಸಿದ್ದಾರೆ. ಮಿಗಿಲಾಗಿ ವಿರೋಧಭಾವನೆಯನ್ನು ಸರ್ವಾರ್ಥ ತ್ಯಾಗಗೊಳಿಸಿ ಸಮಸ್ತ ಜೀವಿಗಳೆಡೆ ತನ್ನಂತರಂಗದಿ  ಪ್ರೇಮವನ್ನು ವ್ಯಕ್ತಪಡಿಸುತ್ತಾನೋ ಅವನೇ ವೀರಶೈವ. ಹೀಗಾಗಿಯೇ ಶಕ್ತಿವಿಶಿಷ್ಟಾದ್ವೈತವೆಂದು ಕರೆಯಲಾಗುವ ವೀರಶೈವ ಸಿದ್ಧಾಂತ ಸ್ಥಾಪನೆಯ ಸಂದರ್ಭದಲ್ಲಿ ಈ ಮತದ ಆಚಾರ್ಯರು ಯಾವುದೇ ಮತ ಸಿದ್ಧಾಂತಗಳನ್ನು ಖಂಡಿಸದೆ ವೇದ, ಉಪನಿಷದ್, ಪುರಾಣ, ಆಗಮ ವಾಕ್ಯಗಳ ಆಧಾರದಿಂದ ಸರ್ವಶ್ರುತಿಸಮನ್ವಯವೆನಿಸಿರುವ ವೀರಶೈವ ಸಿದ್ಧಾಂತವನ್ನು ಸ್ಥಾಪಿಸಿದ್ದಾರೆ.

ವಿಷಯ ಸಂಗ್ರಹಣೆ –

೧.’ಶಕ್ತಿವಿಶಿಷ್ಟಾದ್ವೈತ ತತ್ವತ್ರಯವಿಮರ್ಶೆ’

೨. ವೀರಶೈವ ಅಷ್ಟಾವರಣವಿಜ್ಞಾನ

Someshwar Gurumath

Someshwar Gurumath is an author, filmmaker, poet, songwriter, and public speaker from Hubli, Karnataka. He has a BSc in Visual Media and is currently pursuing PG Diploma in Public leadership at the Rashtram School of Public Leadership, Rishihood University. He has published two books so far, titled Nanu Nanna Jagattu and Payanigana Kavyagalu, both of which are anthologies of his poems. Through his writings and filmmaking, he aspires to bring about a unified cultural consciousness and motivate people to work towards the renaissance of Bhārata.

0 Reviews

Related post