ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ

 ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ

“ಧರ್ಮ  ಏವ ಹತೋ ಹಂತಿ ಧರ್ಮೋ ರಕ್ಷತಿ ರಕ್ಷಿತಃ”.  ಯಾರು ಧರ್ಮವನ್ನು ರಕ್ಷಿಸುತ್ತಾರೋ , ಧರ್ಮ ಅವರನ್ನು ರಕ್ಷಿಸುತ್ತದೆ. ಯಾರು ಧರ್ಮವನ್ನು ನಾಶಮಾಡಲೆತ್ನಿಸುತ್ತಾರೋ ಧರ್ಮ ಅವರನ್ನು ನಾಶ ಮಾಡುತ್ತದೆ ಎಂದರ್ಥ. ಹಾಗಿದ್ದಲ್ಲಿ ಈ “ಧರ್ಮ” ಎಂದರೇನು? ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. “ಧಾರಯತಿ ಇತಿ ಧರ್ಮ” ಯಾವುದು ಎಲ್ಲವನ್ನೂ ತಾಳುವಂತಹುದೋ ಮತ್ತು ಆಧಾರಸ್ವರೂಪವಾಗಿ ನಿಲ್ಲುವುದೋ ಅದೇ ಧರ್ಮ.  ದೇಶ ಕಾಲಗಳನ್ನು ಮೀರಿ ‘ಋತ ಸಂಚಲನವನ್ನು'(ಬ್ರಹ್ಮಾಂಡ ಚಲನೆಯನ್ನು)   ಸರಿಯಾಗಿ ನಿಭಾಯಿಸುವಲ್ಲಿ ಸಹಾಯ ಮಾಡಬಲ್ಲ ನಿಯಮಿತ ಸೂತ್ರ ಅಥವಾ ತತ್ವಗಳನ್ನಿದು ಒಳಗೊಂಡಿರುತ್ತದೆ. 

ವಸಾಹತುಶಾಹಿತ್ವದಿಂದ ಆರಂಭಗೊಂಡು ಇತ್ತೀಚಿನವರೆಗೂ ನಮ್ಮ ದೇಶದಲ್ಲಿ ಅತಿ ಹೆಚ್ಚು ಅಪಾರ್ಥಕ್ಕೊಳಗಾಗಿರುವ ಪದವೆಂದರೆ ‘ಧರ್ಮ’ ಎನ್ನಬಹುದು. ಧರ್ಮಕ್ಕೂ ಮತ್ತು ರಿಲಿಜನ್ ಪದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸ್ವಾಮಿ ವಿವೇಕಾನಂದರು ಒಂದು ಹೆಜ್ಜೆ ಮುಂದೆ ಹೋಗಿ ಇನ್ನೂಸರಳವಾಗಿ ವಿವರಿಸಿದ್ದಾರೆ. ಏನೆಂದರೆ”ಮೃಗಸದೃಶನಾದವನನ್ನು ಮಾನವನನ್ನಾಗಿ ಮಾಡುವ, ಮಾನವನನ್ನು ದೇವನನ್ನಾಗಿ ಮಾಡುವ ಭಾವನೆಯೇ ಧರ್ಮ”.  ಮನುಷ್ಯ ಮತ್ತು ದೇವರ ನಿರೂಪಣೆ ಹೇಗಿದೆಯೆಂದರೆ ಮನುಷ್ಯನು ಅನಂತ ವೃತ್ತದಂತೆ, ಅದರ ಸುತ್ತಳತೆ ಎಲ್ಲಿಯೂ ಇಲ್ಲ. ಕೇಂದ್ರ ಮಾತ್ರ ಒಂದು ಕಡೆ ಇದೆ.  ದೇವರು ಅನಂತ ವೃತ್ತದಂತೆ, ಅವನ ಸುತ್ತಳತೆ ಎಲ್ಲಿಯೂ ಇಲ್ಲ, ಕೇಂದ್ರ ಎಲ್ಲಾ ಕಡೆಯಲ್ಲಿಯೂ ಇದೆ. ಅಂದರೆ ನಮ್ಮೊಳಗೂ ಸಹ ಆತನ ಕೇಂದ್ರವಿದೆಯೆಂಬುದನ್ನ ಅಲ್ಲಗಳೆಯಲಾಗುವುದಿಲ್ಲ. ಸೂರ್ಯನಿದ್ದಮೇಲೆ ಚಂದ್ರನೂ ಇರಲೇಬೇಕಲ್ಲವೇ? ಹಾಗೆಯೇ ಹಗಲೆಂಬುದು ಪ್ರಕಾಶಕ್ಕೆ ಸಾಕ್ಷಿಯಾದೊಡೆ ರಾತ್ರಿಯು ಕಾರ್ಗತ್ತಲನ್ನು ಬಿಂಬಿಸುತ್ತದೆ. ಅಂತೆಯೇ ದೇವರ ಅಸ್ತಿತ್ವವೆಂಬುದು ಎಷ್ಟು ಸತ್ಯವೋ ಸೈತಾನನ ಇರುವಿಕೆಯು ಅಷ್ಟೇ ಪ್ರಮಾಣವಾದದ್ದು. ಹಾಗಿದ್ದಲ್ಲಿ ಇವರಿಬ್ಬರ ನಡುವಿನ ವ್ಯತ್ಯಾಸವೇ ನಿಸ್ವಾರ್ಥತೆ ಮತ್ತು ಸ್ವಾರ್ಥಪರತೆಯಲ್ಲಿದೆ. ಸೈತಾನನಿಗೆ ದೇವರಷ್ಟೇ ಜ್ಞಾನವಿದೆ, ಆದರೆ ಪಾವಿತ್ರ್ಯತೆ ಇಲ್ಲ. ಅದಕ್ಕೆ ಅವನು ಸೈತಾನನಾಗಿರುವುದು. ಆಧುನಿಕ ಪ್ರಪಂಚಕ್ಕೂ ಇದನ್ನೇ ಅನ್ವಯಿಸಿ, ಪವಿತ್ರತೆಯೇ ಇಲ್ಲದ ವಿಪರೀತ ಜ್ಞಾನ ಮತ್ತು ಶಕ್ತಿ ಮನುಷ್ಯರನ್ನು ಸೈತಾನರನ್ನಾಗಿ ಮಾಡಿರುವವೆಂದು ಪ್ರಾಸ್ತಾವಿಕ ನೈಜತೆಯ ಕುರಿತು ಸ್ವಾಮೀಜಿ ನಿಷ್ಠುರವಾಗಿ ನುಡಿಯುತ್ತಾರೆ. ಧರ್ಮಕ್ಕೆ ನಮ್ಮ ಅವಶ್ಯಕತೆಯಿಲ್ಲದಿರಬಹುದು ಆದರೆ ನಮಗೆ ಧರ್ಮದ ಅವಶ್ಯಕತೆಯೇಕಿದೆಯೆಂಬುದನ್ನು ನಾವಿಲ್ಲಿ ಮನಗಾಣಬಹುದು.  

”ಆಮೆಗೆ ತನ್ನ ಹೊರಮೈ ಮೇಲೆ ಹೊತ್ತುಕೊಂಡಿರುವ ಕವಚವು ಎಂದಿಗೂ ಭಾರವೆನಿಸುವುದಿಲ್ಲ. ನೈಸರ್ಗಿಕವಾಗಿ ಅದರೊಂದಿಗೆ ಬದುಕುತ್ತದೆ. ಕಾಡಿನಲ್ಲೆದುರಿಸಬಹುದಾದ ಅಪಾಯಕಾರಿ ಸನ್ನಿವೇಶಗಳಲ್ಲಿ ಆ ಕವಚವೇ ಅದಕ್ಕೆ ಹೇಗೆ ರಕ್ಷಣೆಯನ್ನು ಒದಗಿಸುವುದೋ ಹಾಗೆಯೇ ಧರ್ಮಪರಿಪಾಲಿಸುವ ವ್ಯಕ್ತಿಯನ್ನು ಲೌಕಿಕ ವ್ಯವಹಾರಗಳಲ್ಲಿ ಧರ್ಮವೇ ಹೇಗೆ ರಕ್ಷಿಸುತ್ತದೆಂಬುದಕ್ಕೆ ಒಂದು ಪುಟ್ಟ ನಿದರ್ಶನ”. ಧರ್ಮಪಾಲ ಮತ್ತು ಧನಪಾಲ ಕಾಶೀರಾಜ್ಯದ ಪ್ರಖ್ಯಾತ ಶ್ರೇಷ್ಠಿಗಳು. ಉತ್ತರ-ದಕ್ಷಿಣಪಥದಲ್ಲಿ ಸಾಗಿ ದೂರರಾಜ್ಯಗಳಲ್ಲಿ ವ್ಯಾಪಾರ ನಡೆಸುತ್ತಿದ್ದರು. ಧರ್ಮಪಾಲನೊಮ್ಮೆ ವ್ಯಾಪಾರಿಗಳ ತಂಡ, ಸಶಸ್ತ್ರ ಕಾವಲುಗಾರರು, ಮತ್ತು ತುಂಬಿದ ಸಾವಿರಾರು ಎತ್ತಿನಬಂಡಿಗಳಜೊತೆ  ವ್ಯಾಪಾರಕ್ಕಾಗಿ ಹೊರಟ. ಧನಪಾಲ ಆಗಲೇ ಕೆಲವು ದಿನಗಳ ಹಿಂದೆಯೇ  ತನ್ನತಂಡದೊಡನೆ ಹೊರಟಿದ್ದ. ಅನೇಕ ದಿನಗಳನಂತರ ಧರ್ಮಪಾಲನು ವಿಸ್ತಾರವಾದ ಮರುಭೂಮಿಯನು ಪ್ರವೇಶಿಸತೊಡಗಿದನು. ಮುಂಜಾಗರೂಕತೆಯಿಂದ ವಾರಕ್ಕೆ ಸಾಕಾಗುವಷ್ಟು ನೀರು ಶೇಖರಿಸಿಕೊಂಡರು. ಮುನ್ನಡೆಯುತ್ತ ವೃದ್ಧ  ವ್ಯಕ್ತಿಯೊಬ್ಬರು ಕಾಣಿಸಿಕೊಂಡರು. “ದಯಮಾಡಿ ನನ್ನನೂ ನಿಮ್ಮೊಡನೆ ಕರೆದೊಯ್ಯಿರಿ. ನನ್ನಿಂದಾದ ಸಹಾಯವನ್ನು ಮಾಡುತ್ತೇನೆ “ಎಂದರು. ಧರ್ಮಪಾಲನ ಅನುವರ್ತಿಗಳು ಗೊಳ್ಳನೆ ನಕ್ಕರು. “ಅಜ್ಜ ! ಸ್ವಂತರಕ್ಷಣೆಗೆ ದೊಣ್ಣೆ ಎತ್ತುವ ಶಕ್ತಿಯಿಲ್ಲ, ನಮ್ಮನ್ನೇನು ಕಾಪಾಡುತ್ತೀಯೆ ? ಎಂದು ಕುಹಕವಾಡಿದರು.  ” ಆದರೆ ಧರ್ಮಪಾಲನ ಮನಸ್ಸು ಅನುಕಂಪದಿಂದ ಕರಗಿತು. ಗೌರವದಿಂದ ವೃದ್ಧರನ್ನು ಕರೆತಂದು ಪಕ್ಕದಲ್ಲೇ ಬಂಡಿಯಲ್ಲಿ ಕುಳ್ಳಿರಿಸಿಕೊಂಡನು. ಉರಿಬಿಸಿಲಲ್ಲಿ ಮುಂದುವರೆಯುತ್ತ, ಎದುರಿನಿಂದ ಬರುತ್ತಿದ್ದ ಪ್ರಯಾಣಿಕರ ಗುಂಪೊಂದು ಕಂಡುಬಂದಿತು. ಅವರ ಬಟ್ಟೆಗಳು ನೆನೆದಿದ್ದವು. ಅವರು ಮಾತನಾಡುತ್ತಿರುವುದು ಕೇಳಿಬಂತು “ಅಬ್ಬಾ ಎಷ್ಟು ಇಂಪಾದ ನೀರಿನ ಚಿಲುಮೆ. ಪ್ರಯಾಣಿಕರಿಗೆ ವರವೇ ಸರಿ ! “. ಇದನ್ನು ಕೇಳಿದ ಧರ್ಮಪಾಲನ ಅನುವರ್ತಿಗಳು “ಮುಂದೆ ಚಿಲುಮೆ ಇದ್ದರೆ, ನೀರನ್ನು ಹೊರುವುದೇತಕ್ಕೆ.ಇದರಿಂದಾಗಿ ಪ್ರಯಾಣ ನಿಧಾನವಾಗುತ್ತಿದೆ ” ಎಂದರು. ಧರ್ಮಪಾಲನಿಗೂ ಸರಿಯೆಂದನ್ನಿಸಿದರೂ, ಪಕ್ಕದಲ್ಲಿ ಕುಳಿತಿದ್ದ ಅಜ್ಜ “ನಂಬಬೇಡಿ ಶ್ರೇಷ್ಠಿ !  ಬಾಯಾರಿಕೆಯಿಂದ ಬಳಲಿ ದುರ್ಬಲರಾದ ಪ್ರಯಾಣಿಕರನ್ನು ಅಪಹರಿಸಲು ಕಾಯುತ್ತಿರುವ ಮೋಸಗಾರರಿವರು !”. ಧರ್ಮಪಾಲನಿಗೆ ಸಂದಿಗ್ಧ. ವೃದ್ಧನ ಮಾತು ತಳ್ಳಿಹಾಕಲಾರದೆ, ಹಾಗೆಯೇ ಮುಂದುವರೆಯಲು ಆದೇಶಿಸಿದ. ಇತರರು “ಛೆ !'” ನಾವೂ ಧನಪಾಲನ ತಂಡದಲ್ಲೇ ಹೋಗಬೇಕಿತ್ತೆಂದು ಗೊಣಗಿದರು. ಒಂದೆರಡು ದಿನಗಳ ಪ್ರಯಾಣವಾದರೂ ಚಿಲುಮೆ ಕಾಣಲಿಲ್ಲ. ಬದಲಾಗಿ ಕಂಡದ್ದು, ನಿರ್ಗತಿಕರಾಗಿ ಬಿದ್ದಿದ್ದ ಧನಪಾಲನ ತಂಡ ! “ಅಜ್ಜ ನಿಮ್ಮ ಮಾತು ಸತ್ಯ, ಹೇಗೆ ತಿಳಿಯಿತು ನಿಮಗೆ ?” ಎಂದುಕೇಳಲಾಗಿ “ಹತ್ತಿರದಲ್ಲಿ ಚಿಲುಮೆಯಿದೆ ಎಂಬ ತೋರಿಕೆಗೆ ಬಟ್ಟೆಗಳು ಒದ್ದೆಮಾಡಿಕೊಂಡಿದ್ದರಾದರೂ, ಆಕಾಶದಲ್ಲಿ ಒಂದು ಪಕ್ಷಿಯೂ ಕಾಣಲಿಲ್ಲ. ಸಂಶಯದಿಂದ ಅವರ ಕಂಗಳನ್ನು ಗಮನಿಸಿದಾಗ, ಅವರ ದೌಷ್ಟ್ಯ ಬಯಲಾಯಿತು” 

ಕಾಶೀ ಕ್ಷೇತ್ರವೇ ನಮ್ಮ ಶರೀರ. ಇಂದ್ರಿಯಗಳ ಮೂಲಕ ವ್ಯಾಪಾರ ನಡೆಸುತ್ತೇವೆ. ಹೊರವ್ಯಾಪಾರ ಕ್ಷೇತ್ರವು ಮರುಭೂಮಿಯಂತೆ. ಒಳಕ್ಷೇತ್ರದಲ್ಲಿ ಅಮೃತಮಯವಾದ ನೀರುಂಟು. ಇಂದ್ರಿಯಲಾಲಸೆ ಮರೀಚಿಕೆಯನ್ನುಂಟುಮಾಡಿ, ಭ್ರಮೆಗೊಳಿಸುತ್ತದೆ. ವ್ಯಾಪಾರದಲ್ಲಿ ಧನ-ಬಲಗಳಿಂದ ಕೂಡಿದ ಧನಪಾಲರ ಸಂಗವನ್ನು ಸಹಜವಾಗಿಯೇ ಬಯಸುತ್ತೇವೆ. ಅಮೃತವನ್ನು ಚೆಲ್ಲಿ ಇಂದ್ರಿಯಗಳು ತೋರಿಸುವ ಮರೀಚಿಕೆಗೆ ಮೋಸಹೋಗಿ ನಿಜವಾದ ಧನವನ್ನು ಕಳೆದುಕೊಳ್ಳುತ್ತೇವೆ.  ವಯೋವೃದ್ಧನೂ  ಜ್ಞಾನವೃದ್ಧನೂ ಆದ ಧರ್ಮವನ್ನು ದುರ್ಬಲನೆಂದು ತಿರಸ್ಕರಿಸುತ್ತೇವೆ. ಧರ್ಮವು  ಸತ್ಯವನ್ನು ರಕ್ಷಿಸಿ ನಮಗೆ ತಿಳಿಯಪಡಿಸುತ್ತದೆ. ನೋಡುವ ಶಕ್ತಿಯೇ ಕಣ್ಣಿನ ಧರ್ಮ, ಕೇಳುವುದು ಕಿವಿಯ ಧರ್ಮ. ಅಂತೆಯೇ ಭ್ರಮೆಗೊಳಗಾಗದೆ ಒಳಸತ್ಯವನ್ನು ಅರಿಯುವುದು ಆತ್ಮಧರ್ಮ. ಧರ್ಮವನ್ನು ರಕ್ಷಿಸಿಕೊಂಡರೆ, ಒಳಬೆಳಕನ್ನು ತೋರಿ ರಕ್ಷಿಸುತ್ತದೆ. ಇಂದ್ರಿಯಗಳನ್ನು ಹತೋಟಿಯಲ್ಲಿಡುತ್ತದೆ. ಅಂತಹ ಧರ್ಮವನ್ನು ಪಾಲಿಸುವ ಧರ್ಮಪಾಲ ಎಂದೂ ಸುರಕ್ಷಿತ.  “ಧರ್ಮವನ್ನು ರಕ್ಷಿಸಿದವರನ್ನು ಧರ್ಮವು ರಕ್ಷಿಸುತ್ತದೆ” ಎಂಬ ಈ ತತ್ತ್ವ ಸಾರ್ವಕಾಲಿಕವಾದದ್ದು. 

ಮಾನವಜನ್ಮವನ್ನು ಪಡೆದ ಮೇಲೆ ಮಾನವಧರ್ಮದಾಚರಣೆಯು ನಮ್ಮೆಲ್ಲರ ಹೊಣೆಯಾಗುತ್ತದೆ. ಪಿತೃಧರ್ಮ, ಮಾತೃಧರ್ಮ, ಪುತ್ರಧರ್ಮದಂತೆ ಆಯಾ ವೃತ್ತಿಗಳಿಗೆ ಅದರದೇ ಆಗಿರುವ ಧರ್ಮಗಳಿವೆ. ಮೇಲಾಗಿ ನಿಷ್ಠಾವಂತರಾಗಿ ಅವುಗಳನ್ನು ಪಾಲಿಸಿದ್ದೇ ಆದಲ್ಲಿ, ಸೃಷ್ಟಿ, ಸ್ಥಿತಿ ಹಾಗೂ  ಲಯವನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಲು, ದೂರದೃಷ್ಟಿಯನ್ನು ಆಂತರಿಕವಾಗಿ ಪಡೆಯುವಲ್ಲಿ ಮತ್ತು  ವ್ಯಕ್ತಿಯೋರ್ವನಿಗೆ ಬದುಕಿನ ಪ್ರತೀ ಹಂತದಲ್ಲಿಯೂ ಮೆಟ್ಟಿಲಾಗಿ ನಿಲ್ಲಲು ಕಾರಣವಾಗಬಲ್ಲದು. ಹೀಗಾಗಿಯೇ “ಧರ್ಮೋ ರಕ್ಷತಿ ರಕ್ಷಿತಃ” ಎಂಬ ಸತ್ಯೋಕ್ತಿಯಂತೆ ನಿಸ್ಸಂಶಯವಾಗಿ  ‘ಧರ್ಮವೇ ವಿಶ್ವಕ್ಕೆ ಶಾಂತಿಯನ್ನು ನೀಡಬಲ್ಲದು”.

ವಿಷಯಋಣ –

ರಾಷ್ಟ್ರ ಜಾಗೃತಿ ಸ್ವಾಮಿ ವಿವೇಕಾನಂದ – ಯಾದವಗಿರಿ ಮೈಸೂರು ಆಶ್ರಮ 

ಹಿಂದೂ ಧರ್ಮದ ಕರೆ ಸ್ವಾಮೀ  ವಿವೇಕಾನಂದ

Someshwar Gurumath

Someshwar Gurumath is an author, filmmaker, poet, songwriter, and public speaker from Hubli, Karnataka. He has a BSc in Visual Media and is currently pursuing PG Diploma in Public leadership at the Rashtram School of Public Leadership, Rishihood University. He has published two books so far, titled Nanu Nanna Jagattu and Payanigana Kavyagalu, both of which are anthologies of his poems. Through his writings and filmmaking, he aspires to bring about a unified cultural consciousness and motivate people to work towards the renaissance of Bhārata.

0 Reviews

Related post