ಪಂಚಾಚಾರ್ಯ ಪರಂಪರೆ : ಇತಿಹಾಸ ಮತ್ತು ಪಂಚಪೀಠಗಳು

 ಪಂಚಾಚಾರ್ಯ ಪರಂಪರೆ : ಇತಿಹಾಸ ಮತ್ತು ಪಂಚಪೀಠಗಳು

“ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭೂತಲೇ |

ತದಾ ತದಾವತಾರೋಯಂ ಗಣೇಶಸ್ಯ ಮಹೀತಲೇ || 

ಸ್ಕಂದಪುರಾಣದ ಈ ಪ್ರಮಾಣವಚನವೇ ಹೇಳುವಂತೆ ಎಂದು  ಧರ್ಮಕ್ಕೆ ಅಪಾಯವೆದುರಾಗುತ್ತದೋ ಆಗೆಲ್ಲ ಭಗವಾನ್ ಈಶ್ವರ ತಮ್ಮದೇ ವಿಶೇಷ ಅಂಶವುಳ್ಳ ಶಿವಗಣಗಳ ರೂಪದಲ್ಲಿ ಅವತರಿಸಿ ಪ್ರತ್ಯೇಕ ಯುಗಗಳ ಆರಂಭದಲ್ಲಿ ಧರ್ಮ ಸ್ಥಾಪನೆಯನ್ನು  ಮಾಡುತ್ತಾರೆ. ಅಂತೆಯೇ ಐದು ಆಚಾರ್ಯರು ಸನಾತನ ವೀರಶೈವ ಧರ್ಮದ ಸಂಸ್ಥಾಪಿಸಿದ್ದಾರೆ. ಶಿವನ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ ಮುಖಗಳ ರೂಪದಲ್ಲಿ ವಿರಾಜಮಾನರಾಗಿಹ ಕೊಲ್ಲಿಪಾಕದ ಶ್ರೀ ಸೋಮೇಶ್ವರ ಲಿಂಗ, ವಟಕ್ಷೇತ್ರದ ಶ್ರೀ ಸಿದ್ಧೇಶ್ವರಲಿಂಗ, ದ್ರಾಕ್ಷಾರಾಮ ಕ್ಷೇತ್ರದ ಶ್ರೀ ರಾಮನಾಥಲಿಂಗ, ಸುಧಾಕುಂಡಕ್ಷೇತ್ರದ ಶ್ರೀ ಮಲ್ಲಿಕಾರ್ಜುನಲಿಂಗ ಮತ್ತು ಕಾಶಿ ಕ್ಷೇತ್ರದ ಶ್ರೀ ವಿಶ್ವನಾಥಲಿಂಗದಿಂದ ಕ್ರಮವಾಗಿ ಶ್ರೀ ರೇವಣಾರಾಧ್ಯ, ಶ್ರೀ ಮರುಳಾರಾಧ್ಯ, ಶ್ರೀ ಏಕೋರಾಮಾರಾಧ್ಯ , ಶ್ರೀ ಪಂಡಿತಾರಾಧ್ಯ ಮತ್ತು ಶ್ರೀ ವಿಶ್ವಾರಾಧ್ಯ ಹೆಸರಿನ ಐದು ಜನ ಆಚಾರ್ಯರು ಪ್ರತ್ಯೇಕ ಯುಗಗಳಲ್ಲಿ ವಿಭಿನ್ನ ಹೆಸರಿನಿಂದ ಅವತರಿಸಿ ವೀರಶೈವ ಧರ್ಮದ ಸ್ಥಾಪನೆಯನ್ನು ಮಾಡುತ್ತಲೇ ಬಂದಿದ್ದಾರೆ. ಇವರ ಸಂಕ್ಷಿಪ್ತ ವಿವರಣೆ ಇಂತಿದೆ –

೧. ಶ್ರೀ ಜಗದ್ಗುರು ರೇವಣಾರಾಧ್ಯರು (ರೇವಣಸಿದ್ಧ) – ಜಗದ್ಗುರು ಶ್ರೀ ರೇವಣಾರಾಧ್ಯರು ಶಿವನ ಆದೇಶಕ್ಕನುಸಾರವಾಗಿ ವೀರಶೈವ ಧರ್ಮದ ಸ್ಥಾಪನೆಗೆಂದು ಈಗಿನ ತೆಲಂಗಾಣದ ಸುಪ್ರಸಿದ್ದ ಕೊಲ್ಲಿಪಾಕ ಕ್ಷೇತ್ರದ ಸೋಮೇಶ್ವರ ಲಿಂಗದಿಂದ ಅವತರಿಸಿದರು. ಇವರ ಹೆಸರು ಕೃತಯುಗದಲ್ಲಿ ಏಕಾಕ್ಷರ ಶಿವಾಚಾರ್ಯರೆಂದು, ತ್ರೇತಾಯುಗದಲ್ಲಿ ಏಕವಕ್ತ್ರ ಶಿವಾಚಾರ್ಯರೆಂದು, ದ್ವಾಪರದಲ್ಲಿ ರೇಣುಕ ಶಿವಾಚಾರ್ಯರೆಂದು  ಮತ್ತು ಕಲಿಯುಗದಲ್ಲಿ ರೇವಣಾರಾಧ್ಯರ (ರೇವಣಸಿದ್ಧ) ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ.  

 ‘ಅಥ ತ್ರಿಲಿಂಗವಿಷಯೇ  ಕುಲ್ಯಪಾಕಾಭಿಧೇ ಸ್ಥಲೇ |

 ಸೋಮೇಶ್ವರಮಹಾಲಿಂಗಾತ್ ಪ್ರಾದುರಾಸೀತ್ ಸ ರೇಣುಕಃ || (ಸಿ.ಶಿ)

ಸಿದ್ಧಾಂತ ಶಿಖಾಮಣಿಯ ಈ ವಚನದನುಸಾರವಾಗಿ ದ್ವಾಪರಯುಗದಲ್ಲಿ ಶ್ರೀ ಜಗದ್ಗುರು ರೇಣುಕ ಶಿವಾಚಾರ್ಯರು ಕೊಲ್ಲಿಪಾಕದ ಶ್ರೀ ಸೋಮೇಶ್ವರ ಲಿಂಗದಿಂದ ಅವತರಿಸಿ, ಮಲಯಪರ್ವತದಲ್ಲಿ ವಿರಾಜಮಾನರಾದ ಮಹಾಮಹಿಮ ಶ್ರೀ ಅಗಸ್ತ್ಯ ಮಹರ್ಷಿಗಳಿಗೆ ವೀರಶೈವ ಸಿದ್ಧಾಂತದ ಉಪದೇಶವನ್ನು ಮಾಡುತ್ತಾರೆ. “ಶಿವಯೋಗಿ ಶಿವಾಚಾರ್ಯರಿಂದ” ಸಂಗ್ರಹಿತವಾಗಿರುವ ಈ ಉಪದೇಶವೇ ”ಸಿದ್ಧಾಂತ ಶಿಖಾಮಣಿ”ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಧರ್ಮಸ್ಥಾಪನೆಯ ಉದ್ದೇಶದಿಂದ ಕರ್ನಾಟಕದ ಬಾಳೆಹೊನ್ನೂರಿನಲ್ಲಿ ಪೀಠವೊಂದನ್ನು ಸ್ಥಾಪಿಸಿದ್ದಾರೆ. ‘ರಂಭಾಪುರಿ ಪೀಠವೆಂದೇ ‘ ಇದು ಪ್ರಚಲಿತವಾಗಿದೆ. ಇವರ ಶಾಖೆ ರೇಣುಕ ಶಾಖೆಯಂದು ಕರೆಯಲ್ಪಡುವುದು. ಇವರ ಸಿಂಹಾಸನಕ್ಕೆ ವೀರಸಿಂಹಾಸನವೆಂದು ಸಂಬೋಧಿಸುತ್ತಾರೆ. ಇವರು ವೀರಗೋತ್ರಿಗಳ ಆದಿಗುರುವಾಗಿದ್ದಾರೆ.  

ತಸ್ಯೇತಿ ವಚನಂ ಶ್ರುತ್ವಾ ರಾಕ್ಷಸೇಂದ್ರಸ್ಯ ಧೀಮತಃ |

ತಥೇತಿ ಪ್ರತಿಶುಶ್ರಾವ ಸರ್ವಜ್ಗ್ನೋ ಗಣನಾಯಕಃ ||

ತತ್ರ ಸಂತುಷ್ಟಚಿತ್ತಸ್ಯ ಪೌಲಸ್ತ್ಯಸ್ಯೇಷ್ಟಸಿದ್ಧಯೇ |

ಕೋಟಿತ್ರಯಂ ತು ಲಿಂಗಾನಾಂ ಯಥಾಶಾಸ್ತ್ರಂ ಯಥಾವಿಧಿ ||

 ತ್ರಿಕೋಟ್ಯಾಚಾರ್ಯರೂಪೇಣ ಸ್ಥಾಪಿತಂ ತೇನ ತತ್ ಕ್ಷಣೇ| (ಸಿ.ಶಿ ೨೧/ ೩೦- ೩೧)

ಸಿದ್ಧಾಂತ ಶಿಖಾಮಣಿಯ ಈ ವಚನದಿಂದ ಸಿದ್ಧಗೊಳ್ಳುವುದೇನೆಂದರೆ ರಾವಣನು ತನ್ನ ಜೀವಮಾನದಲ್ಲಿ ೯ ಕೋಟಿ ಶಿವಲಿಂಗಗಳನ್ನು ಸ್ಥಾಪಿಸುವ ಸಂಕಲ್ಪವನ್ನು ಕೈಗೊಂಡಿದ್ದನು, ಆದರೆ ೬ ಕೋಟಿ ಲಿಂಗಗಳನ್ನುಮಾತ್ರ  ಸ್ಥಾಪಿಸಿದ್ದನು. ಮೃತ್ಯುವಿನ ಸಮಯದಲ್ಲಿ ತನ್ನ ಸಹೋದರನಾದ ವಿಭೀಷಣನಿಂದ ಉಳಿದ ೩ ಕೋಟಿ ಲಿಂಗಗಳನ್ನು ಸ್ಥಾಪಿಸಬೇಕೆಂದು ವಚನ ಪಡೆದಿದ್ದನು. ಶ್ರೀ ರೇಣುಕಾಚಾರ್ಯರು ವ್ಯೋಮಮಾರ್ಗದಿಂದ ಲಂಕೆಯನ್ನು ತಲುಪಿದರು, ಆಗ ಸಾದೃಶ್ಯವನ್ನು ಕಂಡ ವಿಭೀಷಣನು ಅವರ ಮಹಿಮೆಯನ್ನರಿತು ತನ್ನ ಸಹೋದರನ ಅಭಿಲಾಷೆಯನ್ನು  ಪೂರ್ಣಗೊಳಿಸುವಂತೆ ಬೇಡಿಕೊಂಡನು. ವಿಭೀಷಣನ ಈ ಪ್ರಾರ್ಥನೆಯನುಸಾರವಾಗಿ ಶ್ರೀ ರೇಣುಕಾಚಾರ್ಯರು  ಒಂದೇ ಸಮಯದಲ್ಲಿ ಮೂರು ಕೋಟಿ ಆಚಾರ್ಯರ ಸ್ವರೂಪವನ್ನು ಧಾರಣ ಮಾಡಿ ಮೂರು ಕೋಟಿ  ಶಿವಲಿಂಗಗಳನ್ನು ಸ್ಥಾಪಿಸಿ ಮರಳಿ ಕೊಲ್ಲಿಪಾಕದ ಸೋಮೇಶ್ವರ ಶಿವಲಿಂಗದಲ್ಲಿ ಲೀನವಾದರು.

 ‘ಶ್ರೀಮದ್ರೇವಣಸಿದ್ಧಸ್ಯ ಕುಲ್ಯಪಾಕಪುರೋತ್ತಮೇ |

ಸೋಮೇಶಲಿಂಗಾಜ್ಜನನಮಾವಾಸಃ ಕದಲೀಪುರೇ ||

ಸ್ವಾಯಂಭುವಾಗಮದ ಈ ವಚನದನುಸಾರ ಅದೇ ರೇಣುಕಾಚಾರ್ಯರು ಕಲಿಯುಗದಾರಂಭದಲ್ಲಿ ಅದೇ ಸೋಮೇಶ್ವರಲಿಂಗದಿಂದ ರೇವಣಸಿದ್ಧರೆಂಬ ಹೆಸರಿನಿಂದ ಅವತರಿಸಿದರು.  ಹದಿನಾಲ್ಕುನೂರು ವರ್ಷಗಳ  ಕಾಲ ಭೂಮಂಡಲದಲ್ಲಿದ್ದುಕೊಂಡು ಅನೇಕ ಲೀಲೆಗಳನ್ನು ಮಾಡಿದರು.  ಅವುಗಳಲ್ಲಿ ವಿಕ್ರಮರಾಜನಿಗೆ ಯಾರಿಂದ ವಿಕ್ರಮಸಂವತ್ ಪ್ರಚಲಿತಗೊಂಡಿತೋ, ಅವರಿಗೆ  ವಿಜಯಖಡ್ಗಪ್ರದಾನ, ಕಾಂಚಿಯ ವಿಜಯೇಂದ್ರಚೋಲಭೂಪಾಲರಿಗೆ ಅನುಗ್ರಹಿಸುವುದು, ಮಹಾರಾಷ್ಟ್ರದ ಕೋಲ್ಹಪುರದ ಗೋರಕ್ಷನಾಥರ ಗರ್ವಹರಣ ಮತ್ತು ಜಗದ್ಗುರು ಆದಿಶಂಕರಾಚಾರ್ಯರಿಗೆ ಚಂದ್ರಮೌಳೇಶ್ವರ ಲಿಂಗ ತಥಾ ರತ್ನಗರ್ಭ ಗಣಪತಿಯನ್ನು ಪ್ರದಾನ ಮಾಡಿರುವಂತಹ ಪ್ರಸಂಗಗಳು ಪ್ರಸಿದ್ಧವಾಗಿವೆ.

ಜಗದ್ಗುರು ಆದಿ ಶಂಕರಾಚಾರ್ಯರ ಚರಿತ್ರೆಯನ್ನು ಪ್ರತಿಪಾದಿಸುವಂಥಹ ಅನೇಕ ಗ್ರಂಥಗಳಿವೆ, ಅವುಗಳಲ್ಲಿ ಶೃಂಗೇರಿ ಪೀಠದ ಆಸ್ಥಾನ ಪಂಡಿತ ಕಾಶೀಲಕ್ಷ್ಮಣಶಾಸ್ತ್ರಿಗಳಿಂದ ರಚಿಸಲ್ಪಟ್ಟಿರುವ “ಗುರುವಂಶಕಾವ್ಯದಲ್ಲಿ”

‘ಶ್ರೀ ಚಂದ್ರಮೌಳೀಶ್ವರಲಿಂಗಮಸ್ಮೈ ಸದ್ರತ್ನಗರ್ಭ ಗಣನಾಯಕಂ ಚ |

ಸ ವಿಶ್ವರೂಪಾಯ  ಸುಸಿದ್ದದತ್ತಂ ದತ್ವಾ ನ್ಯಗಾದೀಚ್ಛಿರಮರ್ಚಯೇತಿ || 

ಶ್ರೀ ಜಗದ್ಗುರು ಶಂಕರಾಚಾರ್ಯರು ಶೃಂಗೇರಿಯಿಂದ ಕಂಚಿಗೆ ತೆರಳುವ ಪೂರ್ವದಲ್ಲಿ ತಮ್ಮ ಪ್ರಥಮ ಶಿಷ್ಯರಾದ ಸುರೇಶ್ವರಾಚಾರ್ಯರನ್ನು ಕರೆದು ಶ್ರೀ ರೇವಣಸಿದ್ಧ ಮಹಾಯೋಗಿಯ ಮೂಲಕ ಪ್ರಾಪ್ತವಾಗಿರುವ ಚಂದ್ರಮೌಳೇಶ್ವರ ಲಿಂಗ ತಥಾ ರತ್ನಗರ್ಭ ವಿನಾಯಕನನ್ನು ನೀಡಿ ಪೂಜೆಯ ಭಾರವನ್ನು ಅವರ ಹೆಗಲಿಗೆ ಹಸ್ತಾಂತರಿಸಿದರು. ಈ ಶ್ಲೋಕದ ವ್ಯಾಖ್ಯರಚನೆಯ ಸಂದರ್ಭದಲ್ಲಿ ಸ್ವಯಂ ಗ್ರಂಥಕರ್ತೃಗಳೇ “ಸುಸಿದ್ದದತ್ತಂ ಸುಸಿದ್ದೇನ ರೇವಣಸಿದ್ಧಮಹಾಯೋಗಿನಾದತ್ತಂ ಶ್ರೀ ಚಂದ್ರಮೌಳೀಶ್ವರಲಿಂಗಮ್” ಎಂದು ಈ ಪ್ರಕಾರವಾಗಿ ”ಸುಸಿದ್ದ” ಶಬ್ದದರ್ಥ ರೇವಣಸಿದ್ಧಮಹಾಯೋಗಿಗಳೆಂದೇ ಸ್ಪಷ್ಟಪಡಿಸಿದ್ದಾರೆ. ಇಂದಿಗೂ ಸಹ ಶೃಂಗೇರಿ ಪೀಠದಲ್ಲಿ ವಿರಾಜಮಾನವಾಗಿರುವ ಚಂದ್ರಮೌಳೇಶ್ವರ ಲಿಂಗವು ವೀರಶೈವಮತದ ಸಂಸ್ಥಾಪಕರಾದ ಕಲಿಯುಗದ ಶ್ರೀ ರೇವಣಸಿದ್ಧ ಮಹಾಯೋಗಿಗಳಿಂದ ಪ್ರಾಪ್ತವಾದದ್ದೆಂಬುದು ಸಿದ್ಧವಾಗುತ್ತದೆ.

ಹಿಂದಿ ಭಾಷೆಯಲ್ಲಿ ಶಂಕರ ದಿಗ್ವಿಜಯವನ್ನು ರಚಿಸಿರುವಂಥಹ ಆಚಾರ್ಯ ಬಲದೇವ ಉಪಾಧ್ಯಾಯರು ಗುರುವಂಶಕಾವ್ಯದನುಸಾರವಾಗಿ ಶಂಕರಾಚಾರ್ಯರ ಚರಿತ್ರೆಯನ್ನು ಬರೆಯುತ್ತ ಅವರ ವೈಶಿಷ್ಟ್ಯವನ್ನು ಈ ರೀತಿಯಾಗಿ ವಿವರಿಸುತ್ತಾರೆ. “शारदा को हराया और उन्हें श्रृंगेरी में अपने साथ ले आये। शारदा की प्रतिष्ठा की और चंद्रमौलेश्वर लिंग, जिसे रेवणमहायोगी ने दिया था, रत्नगर्भ विनायक तथा शारदा की पूजा का भार सुरेश्वर पर रखकर वे काञ्ची पधारे। ” ಅಂದರೆ ಶಾರದೆಯನ್ನು ಸೋಲಿಸಿ ಶೃಂಗೇರಿಗೆ ತಮ್ಮೊಡನೆ ಕರೆತಂದರು. ಶಾರದೆಯನ್ನು ಪ್ರತಿಷ್ಠಾಪಿಸಿ, ರೇವಣಮಹಾಯೋಗಿಗಳು ನೀಡಿರುವಂಥಹ ಚಂದ್ರಮೌಳೇಶ್ವರ ಲಿಂಗ ಮತ್ತು ರತ್ನಗರ್ಭ ವಿನಾಯಕನ ಪೂಜೆಯ ಭಾರವನ್ನು ಸುರೇಶ್ವರರಿಗೆ ನೀಡಿ ಕಂಚಿಯತ್ತ ಹೊರಟರು ಎಂದರ್ಥ. ಇನ್ನು ನಿಟ್ಟೂರು ನಂಜನಾಚಾರ್ಯರಿಂದ ರಚಿಸಲ್ಪಟ್ಟಿರುವ ವೇದಾಂತಸಾರ ವೀರಶೈವಚಿಂತಾಮಣಿ ಎಂಬ ಗ್ರಂಥದಲ್ಲಿ –

     “ಶಂಕರಾಚಾರ್ಯಸನ್ನಾಮ ಯೋಗೀನ್ದ್ರಾಯ ಮಹೋಜ್ವಲಂ |

      ಚಂದ್ರಮೌಳೀಶ್ವರಂ ಲಿಂಗಂ ದತ್ತವಾನಿತಿ ವಿಶ್ರುತಂ ||

      ಶ್ರೀ ರೇಣುಕಗಣೇಶಖ್ಯಾಂ ರೇವಣಾಸಿದ್ಧದೇಶಿಕಮ್ |

     ವೀರಶೈವಮತಾಚಾರ್ಯಂ ವಂದೇಹಂ ತಂ ಜಗದ್ಗುರುಮ್ ||

ಸ್ತೋತ್ರರೂಪದ ಈ ಶ್ಲೋಕದನುಸಾರ ರೇಣುಕಾಚಾರ್ಯರ ಮತ್ತೊಂದು ಅವತಾರ ಸ್ವರೂಪವಾದ ರೇವಣಸಿದ್ದರಿಂದ ಆದಿಶಂಕರಾಚಾರ್ಯರಿಗೆ ಚಂದ್ರಮೌಳೀಶ್ವರ ಲಿಂಗದ ಪ್ರಾಪ್ತಿಯಾಯಿತು. ಶ್ರೀ ಜಗದ್ಗುರು ಶಂಕರಾಚಾರ್ಯರ ಶೃಂಗೇರಿ ಪೀಠ  ಮತ್ತು ಶ್ರೀ ಜಗದ್ಗುರು ರೇಣುಕಾಚಾರ್ಯರ ರಂಭಾಪುರಿ ಪೀಠಗಳು ಅತ್ಯಂತ ಸನಿಹದಲ್ಲೇ ಇವೆ. ಪ್ರಾಚೀನ ಕಾಲದಿಂದಲೂ ಎರೆಡೂ ಪೀಠಗಳ ಮಧ್ಯೆ ಮಧುರ ಸಂಬಂಧವಿದೆ. ವರ್ತಮಾನದಲ್ಲಿ ” ಶ್ರೀ ೧೦೦೮ ಜಗದ್ಗುರು ಪ್ರಸನ್ನರೇಣುಕ ವೀರಸೋಮೇಶ್ವರ ಶಿವಾಚಾರ್ಯರು” ರಂಭಾಪುರಿ ಪೀಠ ಪರಂಪರೆಯನ್ನು ಮುನ್ನಡೆಸುತ್ತಿದ್ದಾರೆ.

೨. ಶ್ರೀ. ಜ. ಮರುಳಾರಾಧ್ಯ – ಭಗವಾನ್ ಶಿವನ ಆಜ್ಞೆಗನುಸಾರವಾಗಿ ಶ್ರೀ.ಜ. ಮರುಳಾರಾಧ್ಯರು ವೀರಶೈವ ಧರ್ಮದ ಸ್ಥಾಪನೆಗಾಗಿ ಕ್ಷಿಪ್ರಾ ನದಿಯ ತಟದಲ್ಲಿ ವಿರಾಜಮಾನ ವಟಕ್ಷೇತ್ರದ ಸಿದ್ದೇಶ್ವರ ಲಿಂಗದಿಂದ ಪ್ರತ್ಯೇಕ ಯುಗಗಳಲ್ಲಿ  ಅವತರಿಸಿದರು. ಕೃತಯುಗದಲ್ಲಿ ದ್ವ್ಯಕ್ಷರಶೈವಾಚಾರ್ಯ, ತೇತ್ರಾಯುಗದಲ್ಲಿ ದ್ವಿವಕ್ತ್ರ ಶಿವಾಚಾರ್ಯ ಮತ್ತು ಕಲಿಯುಗದಲ್ಲಿ ಮರುಳಾರಾಧ್ಯಶಿವಾಚಾರ್ಯರೆಂದು ಈ ರೀತಿಯಾಗಿ ಯುಗಭೇದ ಮತ್ತು ನಾಮಭೇದಗಳೆರೆಡೂ ಉಂಟು.

 “ತದ್ವನ್ಮರುಳಸಿದ್ಧಸ್ಯ ವಟಕ್ಷೇತ್ರೇ ಮಹತ್ತರೇ |

 ಸಿದ್ದೇಶಲಿಂಗಾಜ್ಜನನಂ ಸ್ಥಾನಮುಜ್ಜಯಿನೀಪುರೇ ||  “

ಸ್ವಾಯಂಭುವಾಗಮದ ಈ ವಚನದನುಸಾರವಾಗಿ ಇವರು ಧರ್ಮ ಪ್ರಚಾರಕ್ಕೆಂದು ಉಜ್ಜಯಿನಿ (ಮಧ್ಯಪ್ರದೇಶದಲ್ಲಿ) ಪೀಠವೊಂದನ್ನು ಸ್ಥಾಪಿಸಿದರು. ಇತ್ತೀಚೆಗೆ ಕರ್ನಾಟಕದ ಬಳ್ಳಾರಿಯ ಉಜ್ಜಯಿನಿಗೆ  ಇದು ಸ್ಥಳಾಂತರಗೊಂಡಿದೆ. ದ್ವಾಪರಯುಗದಲ್ಲಿ ದಾರುಕಾಚಾರ್ಯರು ಈ ಪೀಠದ ಆಚಾರ್ಯರಾಗಿದ್ದರು. ಅವರು ಅಂದಿನ ಕಾಲಘಟ್ಟದಲ್ಲಿ ಸುಪ್ರಸಿದ್ಧರಾಗಿದ್ದ ದಧೀಚಿ ಮಹರ್ಷಿಗಳಿಗೆ ಶಿವತತ್ವದ ಉಪದೇಶವನ್ನು ನೀಡಿ ಕೃತಾರ್ಥಗೊಳಿಸಿದ್ದರು . ಕಲಿಯುಗದ ಶ್ರೀ. ಜ. ಮರುಳಾರಾಧ್ಯರು ನಂದಿ ಗೋತ್ರದ ಆದಿಗುರುಗಳಾಗಿದ್ದಾರೆ. ಇವರದ್ದು ದಾರುಕ ಶಾಖೆಯಾಗಿದೆ. ಇವರ ಸಿಂಹಾಸನವು ಸದ್ಧರ್ಮ ಸಿಂಹಾಸನವೆಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಶ್ರೀ. ಜ. ಮರುಳಾರಾಧ್ಯರು ತಮ್ಮ ಸಮಯದಲ್ಲಿ ಸರ್ವರ್ತ್ರ ಸಂಚಾರ ಮಾಡಿ ವೀರಶೈವ ಧರ್ಮದ ಸ್ಥಾಪನೆಯ ಜೊತೆಗೆ ಅಪಾರ ಶಿಷ್ಯಸಂಪತ್ತಿಯನ್ನು ಗಳಿಸಿಕೊಂಡು ಅವತಾರದ ಪ್ರಯೋಜನವೂ ಸಮಾಪ್ತಗೊಳ್ಳುತ್ತಲೇ ಪುನಃ ಅದೇ ಸಿದ್ದೇಶ್ವರ ಲಿಂಗದಲ್ಲಿ ವಿಲೀನಗೊಂಡರು. ವರ್ತಮಾನದಲ್ಲಿ ” ಶ್ರೀ ೧೦೦೮ ಜಗದ್ಗುರು ಸಿದ್ಧಲಿಂಗ  ರಾಜದೇಶಿಕೇಂದ್ರ ಶಿವಾಚಾರ್ಯರು” ಉಜ್ಜಯಿನಿ ಪೀಠ ಪರಂಪರೆಯನ್ನು ಮುನ್ನಡೆಸುತ್ತಿದ್ದಾರೆ.

೩. ಶ್ರೀ. ಜ. ಏಕೋರಾಮಾರಾಧ್ಯ –  ಶ್ರೀ. ಜ. ಏಕೋರಾಮಾರಾಧ್ಯರು ಶಿವನ ಆದೇಶಕ್ಕನುಸಾರವಾಗಿ ವೀರಶೈವ ಮತಸ್ಥಾಪನೆಗೆ ದ್ರಾಕ್ಷಾರಾಮಾ ಕ್ಷೇತ್ರದ ಶ್ರೀ ರಾಮನಾಥಲಿಂಗದಿಂದ ಅವತರಿಸಿದರು. ಕೃತಯುಗದಲ್ಲಿ ತ್ರ್ಯಕ್ಷರಶೈವಾಚಾರ್ಯ, ತೇತ್ರಾಯುಗದಲ್ಲಿ ತ್ರಿವಕ್ತ್ರ ಶಿವಾಚಾರ್ಯ, ದ್ವಾಪರ ಯುಗದಲ್ಲಿ ಘಂಟಾಕರ್ಣ ಶಿವಾಚಾರ್ಯ ಮತ್ತು ಕಲಿಯುಗದಲ್ಲಿ ಏಕೋರಾಮಾರಾಧ್ಯ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ.

“ದ್ರಾಕ್ಷಾರಾಮೇ ರಾಮನಾಥಲಿಂಗಾದ್ಯು ಗತಚುಷ್ಟಯೇ|

 ಏಕೋರಾಮಸ್ಯ ಜನನಮಾವಾಸಸ್ತು ಹಿಮಾಲಯೇ ||”

ಸ್ವಾಯಂಭುವಾಗಮದ ಈ ವಚನದನುಸಾರ ಧರ್ಮಪ್ರಚಾರಕ್ಕೆಂದು ಇವರು ಹಿಮಾಲಯದಲ್ಲಿ ಪೀಠವೊಂದನ್ನು ಸ್ಥಾಪಿಸಿದರು. ಅದುವೇ ಕೇದಾರಪೀಠವೆಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ಪೀಠಕ್ಕೆ ವೈರಾಗ್ಯಸಿಂಹಾಸವೆಂದೂ ಸಂಬೋಧಿಸುತ್ತಾರೆ. ಇದೇ ಪೀಠದ ಕೃತಯುಗದ ಆಚಾರ್ಯರಾದ ತ್ರ್ಯಕ್ಷರಾಶಿವಾಚಾರ್ಯರಿಂದ ತದಾನೀಂತನ ಸೂರ್ಯವಂಶದ ಮಹಾರಾಜ ಮಾಂಧಾತನು ಶಿವಸಿದ್ಧಾಂತದ ತತ್ವೋಪದೇಶವನ್ನು ಪ್ರಾಪ್ತಿಗೊಳಿಸಿಕೊಂಡಿದ್ದನು. ಇವರು ತಮ್ಮ ಆಯುಷ್ಯದ ಅಂತಿಮ ಘಟ್ಟವನ್ನು ಗುರುಪೀಠದ ಸೇವೆಯಲ್ಲೇ ಕಳೆದರು. ಪ್ರತೀಕವಾಗಿ ಇಂದಿಗೂ ಅವರ ಶಿಲಾಮೂರ್ತಿಯು ಕೇದಾರ ಪೀಠದಲ್ಲಿ ವಿರಾಜಮಾನವಾಗಿದೆ. ಈ ಪೀಠದ ದ್ವಾಪರಯುಗದ ಆಚಾರ್ಯರಾಗಿರುವ ಘಂಟಾಕರ್ಣ ಶಿವಾಚಾರ್ಯರು ಸಮಸ್ತ ಶಿವಕ್ಷೇತ್ರಗಳಿಗೆ ಸಂಚರಿಸಿ ಶಿವತತ್ವವನ್ನು ಬೋಧಿಸಿದ್ದರು. ಪರಿಶಿವನ ಹೆಸರಲ್ಲದೇ ಮತ್ತಾವ ದೇವತೆಯ ನಾಮವೂ ಕಿವಿಗೆ ಬೀಳದಿರಲೆಂದು ತಮ್ಮ ಕಿವಿಯ ಕುಂಡಲಗಳ ಸ್ಥಾನದಲ್ಲಿ ಚಿಕ್ಕ ಗಂಟೆಯನ್ನು ಆಭೂಷಣದ ರೂಪದಲ್ಲಿ ಧಾರಣವನ್ನು ಮಾಡಿದ್ದರು. ಫಲಸ್ವರೂಪವಾಗಿ ಇವರನಾಮವು ಘಂಟಾಕರ್ಣ ಶಿವಾಚಾರ್ಯರೆಂದಾಯಿತು. ಕಾಶಿಯ ಗಂಗಾ ನದಿಯ ತಟದಲ್ಲಿ ಸಾಕಷ್ಟು ಸಮಯವನ್ನಿವರು ಕಳೆದರು. ಅದೇ ಸಮಯದಲ್ಲಿ ವ್ಯಾಸ ಮಹರ್ಷಿಗಳಿಗೆ ಶಿವತತ್ವದ ಉಪದೇಶವನ್ನು ನೀಡಿದರು. ಕಾಶಿಯ ‘ವ್ಯಾಸೇಶ್ವರ ಶಿವಲಿಂಗ’ ಮಂದಿರದಲ್ಲಿ ಈಗಲೂ ಕೈಯಲ್ಲಿ ಶಿವಲಿಂಗವನ್ನು ಹಿಡಿದು ಪೂಜೆಯಲ್ಲಿ ಮಗ್ನವಾಗಿರುವ ಮೂರ್ತಿಯೊಂದಿದೆ. ಇಂದಿಗೂ ‘ವ್ಯಾಸನಗುರುವೆಂದೇ’ ಜನರು ಕರೆಯುತ್ತಾರೆ. ಆ ಮೂರ್ತಿಯು ಘಂಟಾಕರ್ಣರದ್ದೇ , ಮಿಗಿಲಾಗಿ ಅದೇ ಮಂದಿರದ ಸನಿಹ ಚಿಕ್ಕ ಕೊಳವೊಂದಿತ್ತು. ಅದನ್ನ ಘಂಟಾಕರ್ಣ ಕೊಳವೆಂದು ಕರೆಯುತ್ತಿದ್ದರು. ಆದರೀಗ ಕೊಳ ಮರೆಯಾಗಿದೆ.

ಕಲಿಯುಗದ ಆರಂಭದಲ್ಲಿಏಕೋರಾಮಾರಾಧ್ಯರು ಈ ಪೀಠದ  ಜಗದ್ಗುರುಗಳಾಗಿದ್ದರು. ಇವರ ಕಾಲದಲ್ಲಿ ಬಾಣಾಸುರನ ಪುತ್ರಿ ಕುಂ. ಉಷಾ ಪೀಠದಲ್ಲಿಯೇ ಶಾಸ್ತ್ರಾಧ್ಯಯನವನ್ನು ಮಾಡಿ ವಿದೂಷಿಗಳಾಗಿ ಮುಂದೆ ಉಷಾದೇವಿ ಎಂಬ ಹೆಸರಿನಿಂದ ಪ್ರಸಿದ್ಧವಾದಳು. ಶ್ರೀಮತಿ ಉಷಾದೇವಿ ಮತ್ತು ಅವರ ಪತಿ ಶ್ರೀ ಅನಿರುದ್ಧರು ಬಹುದಿನಗಳ ಕಾಲ ಕೇದಾರಪೀಠದಲ್ಲಿಯೇ ವಾಸವಿದ್ದು ಗುರುಗಳ ಸೇವಾರೂಪದಲ್ಲಿ ಭವ್ಯ ಮಠವನ್ನು ಸ್ಥಾಪಿಸಿದರು. ಇಂದಿಗೂ ಉಷಾಮಠವೆಂಬ ಹೆಸರಿನಿಂದ ಅದು ಪ್ರಸಿದ್ಧವಾಗಿದೆ. ಪ್ರಸ್ತುತವಾಗಿ ಓಖೀಮಠವೆಂದು ಕರೆಯಲ್ಪಡುತ್ತಿದೆ. ಶ್ರೀ ಏಕೋರಾಮಾರಾಧ್ಯರ ತಪಪ್ರಭಾವದಿಂದ ಹಲವಾರು ರಾಜಮಹಾರಾಜರು ಇವರ ಶಿಷ್ಯರಾಗಿ ಭೂಮಿದಾನಗೈದು ಜೀವನವನ್ನು ಸಾರ್ಥಗೊಳಿಸಿದ್ದಾರೆ. ಓಖೀಮಠದಲ್ಲಿ ರಾಜ ಜನಮೇಜಯನು ಭೂಮಿದಾನ ನೀಡಿದ ತಾಮ್ರಶಾಸನ ಪ್ರಸ್ತುತದಲ್ಲಿಯೂ ಉಪಲಬ್ಧವಿದೆ.

C:\Users\admin\Downloads\Kaagaz_20211111_091515854166-1 (1) (1).jpg
C:\Users\admin\Downloads\Kaagaz_20211111_091515854166-1 (2) (1).jpg

ಇದರ ತಾತ್ಪರ್ಯ ಇಂತಿದೆ – ಹಿಮವದ್ ಕೇದಾರದಲ್ಲಿ ಜನಮೇಜಯ ಮಹಾರಾಜನ ಕಾಲದಲ್ಲಿ ಸ್ವಾಮೀ ಆನಂದಲಿಂಗ ಜಂಗಮರು ಮಠದ ಜಗದ್ಗುರುಗಳಾಗಿದ್ದರು. ಅವರ ಹೆಸರಿನಲ್ಲೇ ಜನಮೇಜಯನು ಮಂದಾಕಿನಿ, ಕ್ಷೀರಗಂಗಾ , ಸರಸ್ವತಿ ನದಿಗಳ ಸಂಗಮದಲ್ಲಿರುವ ಎಲ್ಲಾ ಕ್ಷೇತ್ರಗಳನ್ನು (ಕೇದಾರಕ್ಷೇತ್ರವೆಂದು ಕರೆಯುತ್ತಾರೆ), ಮಠಕ್ಕೆ ದಾನ ಮಾಡಿದ್ದನು. ಓಖೀಮಠದ ಆಚಾರ್ಯ ಗೋಸ್ವಾಮಿ ಆನಂದಲಿಂಗ ಜಂಗಮ ಮತ್ತವರ  ಶಿಷ್ಯ ಕೇದಾರವಾಸಿ ಶ್ರೀ ಜ್ಞಾನಲಿಂಗ ಜಂಗಮರು ಕೇದಾರೇಶ್ವರನ ಪೂಜಾರ್ಚನೆಯನ್ನು ನಿತ್ಯವೂ ಮಾಡಲೆಂಬುದೇ ದಾನದ ಹಿಂದಿನ ಉದ್ದೇಶವಾಗಿತ್ತು. ಸೂರ್ಯಗ್ರಹಣದ ಸಂದರ್ಭದಲ್ಲಿ ಶ್ರೀ ಕೇದಾರೇಶ್ವರನ ಪ್ರಮಾಣವಾಗಿ ತಮ್ಮ ಮಾತಾಪಿತರ ಶಿವಲೋಕ ಪ್ರಾಪ್ತಿಗೆಂದು ಈ ಕ್ಷೇತ್ರವನ್ನು ಅಧಿಕಾರಸಹಿತವಾಗಿ ದಾನ ನೀಡಿದ್ದರು. ಯುಧಿಷ್ಠಿರನ ರಾಜ್ಯಾರೋಹಣದ ೮೯ ವರ್ಷಗಳು ಕಳೆದ ನಂತರ ಪ್ಲವಂಗನಾಮ ಸಂವತ್ಸರದಲ್ಲಿ ಮಹಾರಾಜ ಜನಮೇಜಯನು ದಾನವನ್ನು ನೆರವೇರಿಸಿದ್ದನು. ಈ ದಾನಪತ್ರದ ಆಧಾರವನ್ನೇ ಗಮನಿಸಿದರೆ ಕೇದಾರೇಶ್ವರ ಮಂದಿರ ಮತ್ತು  ಓಖೀಮಠವು ೫೦೦೦ ವರ್ಷಗಳಿಗಿಂತಲೂ ಪುರಾತನವಾದದ್ದು ಎಂಬ ಸಂಗತಿ ಧೃಢವಾಗುತ್ತದೆ. ಟೆಹರಿ ನರೇಶ್ ಅವರೂ ಸಹ ಇದೇ ಪೀಠದ ಶಿಷ್ಯರಾಗಿದ್ದರು. ಈ ಪೀಠದ ಜಗದ್ಗುರುಗಳನ್ನು ರಾವಲ್ ಉಪಾಧಿಯಿಂದ ಸಂಬೋಧಿಸಲಾಗುತ್ತದೆ. ಟೆಹರಿ ನರೇಶ್ ಅವರೇ ತಿಲಕೋತ್ಸವದ ಸಮಾರಂಭದಲ್ಲಿ ಈ ಉಪಾಧಿಯನ್ನು ನೀಡುತ್ತಾರೆ. ಕೇದಾರಪೀಠದ ಗುರುಪರಂಪರೆಯು ಅವಿಚ್ಛಿನ್ನವಾಗಿ ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಗಡವಾಲ ಇತಿಹಾಸದ ಅನುಸಾರವಾಗಿ ೩೨೪ ಜಗದ್ಗುರುಗಳ ಹೆಸರು ಮತ್ತು ಕಾಲದ ಸ್ಪಷ್ಟತೆಯ ಪರಿಚಯವಾಗುತ್ತದೆ. ಇದೇ ಪೀಠದ ೩೨೪ನೇ ರಾವಲ್ ಶ್ರೀ ೧೦೦೮ ಜಗದ್ಗುರು ನೀಲಕಂಠಲಿಂಗ ಶಿವಾಚಾರ್ಯರು ಓಖೀಮಠ ಮತ್ತು ಗುಪ್ತಕಾಶಿಯ ಮಧ್ಯದಲ್ಲಿ ‘ಉತ್ತರಾಖಂಡ  ವಿದ್ಯಾಪೀಠವೆಂಬ’ ಹೆಸರಿನ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಅಲ್ಲಿ ಸಂಸ್ಕೃತ, ಹಿಂದಿ ಮತ್ತು ಆಯುರ್ವೇದಗಳ ಅಧ್ಯಯನ ಕೇಂದ್ರಗಳಿವೆ. ಅವರ ಸ್ಮರಣಾರ್ಥವಾಗಿ ಅದೇ ವಿದ್ಯಾಪೀಠದಲ್ಲಿ ರಾವಲ್ ಶ್ರೀ ೧೦೦೮ ಜಗದ್ಗುರು ನೀಲಕಂಠಶಿವಾಚಾರ್ಯರ ಅಮೃತಶಿಲೆಯ ಪ್ರತಿಮೆಯನ್ನೂ ಪ್ರತಿಷ್ಠಾಪಿಸಲಾಗಿದೆ. ಈ ರೀತಿಯಲ್ಲಿ ಪೀಠವು ಉತ್ತರಾಖಂಡದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆಯನ್ನು ನೀಡಿದೆ.  ವರ್ತಮಾನದಲ್ಲಿ ಈ ಪೀಠದ ೩೨೮ನೇ ಜಗದ್ಗುರುಗಳಾಗಿ ”ಶ್ರೀ ೧೦೦೮ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯರು” ಪರಂಪರೆಯನ್ನು ಮುನ್ನಡೆಸುತ್ತಿದ್ದಾರೆ. ಈ ಪೀಠದ ಇತಿಹಾಸ ಅಧ್ಯಯನಕ್ಕಾಗಿ ಮತ್ತು ಪರಂಪರೆಯ ವಿಶೇಷತೆಯನ್ನರಿಯಲು “ಗಡವಾಲರ ಇತಿಹಾಸ ಮತ್ತು ಶ್ರೀ ರಾಮದಾಸ ಗೋಡರಿಂದ ರಚಿಸಲ್ಪಟ್ಟಿರುವ ‘ಹಿಂದುತ್ವ’ ಪುಸ್ತಕವನ್ನು ಅವಶ್ಯವಾಗಿ ಅವಲೋಕಿಸಬೇಕು.

೪. ಶ್ರೀ.ಜ. ಪಂಡಿತಾರಾಧ್ಯ – ಶ್ರೀ.ಜ. ಪಂಡಿತಾರಾಧ್ಯರು ಭಗವಾನ್ ಶಿವನ ಆದೇಶಕ್ಕನುಸಾರವಾಗಿ ವೀರಶೈವಧರ್ಮ ಸ್ಥಾಪನೆಗಾಗಿ ಆಂಧ್ರಪ್ರದೇಶದ ಶ್ರೀಶೈಲ ಕ್ಷೇತ್ರದಲ್ಲಿ ವಿರಾಜಮಾನರಾಗಿರುವ ಶ್ರೀ ಮಲ್ಲಿಕಾರ್ಜುನ ಜ್ಯೋತಿರ್ಲಿಂಗದಿಂದ ನಾಲ್ಕೂ ಯುಗದಲ್ಲಿ ವಿಭಿನ್ನ ಹೆಸರುಗಳಿಂದ ಅವತರಿಸಿದರು. ಕೃತಯುಗದಲ್ಲಿ ಚತುರಕ್ಷರ ಶಿವಾಚಾರ್ಯ, ತ್ರೇತಾಯುಗದಲ್ಲಿ ಚತುರ್ವಕ್ತ್ರ ಶಿವಾಚಾರ್ಯ, ದ್ವಾಪರಯುಗದಲ್ಲಿ ಧೇನುಕರ್ಣ ಶಿವಾಚಾರ್ಯ ಮತ್ತು ಕಲಿಯುಗದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯರೆಂಬ ಹೆಸರಿಂದ ಪ್ರಸಿದ್ಧರಾಗಿದ್ದಾರೆ.

“ಸುಧಾಕುಂಡಾಖ್ಯಸುಕ್ಷೇತ್ರೇ ಮಲ್ಲಿಕಾರ್ಜುನಲಿಂಗತಃ |

ಜನನಂ ಪಂಡಿತಾರ್ಯಸ್ಯ ನಿವಾಸಃ ಶ್ರೀಗಿರೌ ಶಿವೇ ||” 

ಸ್ವಾಯಂಭುವಾಗಮದ ಈ ವಚನದನುಸಾರ ವೀರಶೈವ ಧರ್ಮದ ತತ್ವ ಪ್ರಚಾರಕ್ಕಾಗಿ ಶ್ರೀಶೈಲದಲ್ಲಿ ಮಠವೊಂದನ್ನು ಸ್ಥಾಪಿಸಿದರು. ಅದುವೇ ಶ್ರೀಶೈಲಪೀಠ ಮತ್ತು ಸೂರ್ಯಸಿಂಹಾಸನವೆಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಮಹರ್ಷಿ ದಯಾನಂದರು ಒಮ್ಮೆ ಪಂಚಾಕ್ಷರಿಮಂತ್ರದೋಚ್ಚಾರವನ್ನು ಮಾಡಿ ನರಕದ ಸಮಸ್ತ ಜೀವಿಗಳನ್ನು ಉದ್ಧರಿಸಿದ್ದರು. ಇದೇ ಪೀಠದ ದ್ವಾಪರಯುಗ ಆಚಾರ್ಯರಾದ ಧೇನುಕರ್ಣ ಶಿವಾಚಾರ್ಯರಿಂದ ಶಿವತತ್ವವನ್ನರಿತು ತಮ್ಮ ಜೀವನವನ್ನು ಕೃತಾರ್ಥಗೊಳಿಸಿಕೊಂಡಿದ್ದರು.

ಕಲಿಯುಗದ ಆಚಾರ್ಯರಾದ ಶ್ರೀ ಪಂಡಿತಾರಾಧ್ಯರು ಧೇನುಕರ್ಣ ಶಾಖೆ ಮತ್ತು ವೃಷಭ ಗೋತ್ರದ ಆದಿಗುರುಗಳಾಗಿದ್ದಾರೆ. ವರ್ತಮಾನದಲ್ಲಿ “ಶ್ರೀ ೧೦೦೮ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ” ಸ್ವಾಮೀಜಿಗಳು ಪೀಠಪರಂಪರೆಯನ್ನು ಮುನ್ನಡೆಸುತ್ತಿದ್ದಾರೆ.

೫. ಶ್ರೀ.ಜ. ವಿಶ್ವಾರಾಧ್ಯ – ವೀರಶೈವಧರ್ಮದ ಸ್ಥಾಪನೆಗಾಗಿ ಶ್ರೀ.ಜ. ವಿಶ್ವಾರಾಧ್ಯರು ಕಾಶಿ ಕ್ಷೇತ್ರದ ವಿಶ್ವನಾಥ ಜ್ಯೋತಿರ್ಲಿಂಗದಿಂದ ಪ್ರತ್ಯೇಕ ಯುಗಗಳಲ್ಲಿ ಅವತರಿಸುತ್ತಾರೆ. ಕೃತಯುಗದಲ್ಲಿ ಪಂಚಾಕ್ಷರ ಶಿವಾಚಾರ್ಯ, ತೇತ್ರಾಯುಗದಲ್ಲಿ ಪಂಚವಕ್ತ್ರ ಶಿವಾಚಾರ್ಯ, ದ್ವಾಪರಯುಗದಲ್ಲಿ ವಿಶ್ವಕರ್ಣ ಶಿವಾಚಾರ್ಯರೆಂದು ಮತ್ತು ಕಲಿಯುಗದಲ್ಲಿ ವಿಶ್ವಾರಾಧ್ಯ ಶಿವಾಚಾರ್ಯರೆಂಬ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ.

“ಕಾಶ್ಯಾಂ ವಿಶ್ವೇಶ್ವರೇ ವಿಶ್ವಾರಾಧ್ಯಸ್ಯ ಸಂಭವಃ |

ಸ್ಥಾನಂ ಶ್ರೀಕಾಶಿಕಾಕ್ಷೇತ್ರೇ ಶೃಣು ಪಾರ್ವತಿ ಸಾದರಂ||” 

ಸ್ವಾಯಂಭುವಾಗಮದ ಈ ವಚನದನುಸಾರವಾಗಿ ವೀರಶೈವ ತತ್ವದ ಪ್ರಚಾರಕ್ಕೆಂದು ಕಾಶಿಯಲ್ಲಿ ಮಠವನ್ನು ಸ್ಥಾಪಿಸಿದರು, ಅದುವೇ ಕಾಶೀಪೀಠ ಮತ್ತು ಜ್ಞಾನಸಿಂಹಾಸನವೆಂದು ಸಂಬೋಧಿಸಲ್ಪಡುತ್ತಿದೆ. ವರ್ತಮಾನದಲ್ಲಿ ಜಂಗಮವಾಡಿ ಮಠವೆಂಬ ಹೆಸರಿನಿಂದ ಪ್ರಚಲಿತದಲ್ಲಿದೆ. ಕಾಶಿಯ ಅತ್ಯಂತ ಪವಿತ್ರ ಕ್ಷೇತ್ರವಾದ ‘ಆನಂದಕಾನನ’ ಕ್ಷೇತ್ರದಲ್ಲಿಯೇ ಮಠವು ವಿರಾಜಮಾನವಾಗಿದೆ. ಕಾಶೀಖಂಡದಲ್ಲಿ ಈ ಕ್ಷೇತ್ರದ ಮಹಿಮೆಯನ್ನು ಅಪಾರವಾಗಿ ವರ್ಣಿಸಲಾಗಿದೆ. ಪ್ರಾಚೀನ ಕಾಲದಲ್ಲಿ ಅನೇಕ ಮಹರ್ಷಿಗಳು ಇಲ್ಲಿ ತಪಗೈದು ತಮ್ಮ ತಮ್ಮ ಹೆಸರಿನಿಂದ ಶಿವಲಿಂಗಗಳನ್ನು ಸ್ಥಾಪಿಸಿದ್ದಾರೆ. ಈಗಲೂ ಹಾಗೆಯೇ ಅಸ್ತಿತ್ವದಲ್ಲಿವೆ. ಅವುಗಳನ್ನು ಕಂಡು ಈ ಸ್ಥಳದ ಮಹತ್ವವನ್ನರಿತ ಅನೇಕ ಜನರು ಇಂದಿಗೂ ತಮ್ಮ ಪೂರ್ವಜರ ಹೆಸರಿನಲ್ಲಿ ಶಿವಲಿಂಗಸ್ಥಾಪನೆಯನ್ನು ಕೈಗೊಳ್ಳುತ್ತಿದ್ದಾರೆ. ಪ್ರಸ್ತುತ ದರ್ಶಕರಿಗಂತೂ ಆ ಸ್ಥಾನವು “ಸರ್ವಂ ಲಿಂಗಮಯ”ದಂತಿದೆ. ಸುಪ್ರಸಿದ್ದ ದೂರ್ವಾಸ ಮಹರ್ಷಿಗಳಿಗೆ ಈ ಪೀಠದ ಶ್ರೀ.ಜ. ವಿಶ್ವಕರ್ಣ ಶಿವಾಚಾರ್ಯರಿಂದ ಶಿವಾದ್ವೈತ ಸಿದ್ಧಾಂತದ ಬೋಧನೆಯಾಗಿತ್ತು. ಈ ಪೀಠದ ಜಗದ್ಗುರುಗಳು ಸ್ಕಂದಗೋತ್ರ ಮತ್ತು ವಿಶ್ವಕರ್ಣ ಶಾಖೆಯ ಆದಿಗುರುಗಳೆನಿಸಿದ್ದಾರೆ. ಕಾಶಿಯ ಜಂಗಮವಾಡಿ ಮಠವು ಅತ್ಯಂತ ಪ್ರಾಚೀನವೂ ಹಾಗೂ ಐತಿಹಾಸಿಕವಾಗಿದೆ. ಈ ಮಠದ ಶ್ರೀ ಮಲ್ಲಿಕಾರ್ಜುನ ಜಂಗಮ ಎಂಬ ಹೆಸರಿನ ಜಗದ್ಗುರುಗಳ ಸಮಯದಲ್ಲಿ ಕಾಶಿಯ ಶಾಸಕ ಶ್ರೀ ಜಯನಂದದೇವನು ವಿಕ್ರಮ ಸಂವತ್ ನ ೬೩೧ ರ ಪ್ರಬೋಧಿನಿ ಏಕಾದಶಿಯ ದಿನದಂದು ಭೂಮಿದಾನವನ್ನು ಮಾಡಿದ್ದನು. ೧೪೦೦ ವರ್ಷಗಳ ಪ್ರಾಚೀನ ದಾನಶಾಸನ  ಇಂದಿಗೂ ಮಠದಲ್ಲಿ ಸುರಕ್ಷಿತವಾಗಿದೆ. ಮಠಕ್ಕೆ ನೀಡಲಾಗಿದ್ದ ಜಂಗಮಪುರದ ಅದೇ ಭೂಮಿಯಲ್ಲಿ “ಮಹಾಮನಾ ಮದನಮೋಹನ ಮಾಳವೀಯರು ಕಾಶೀ (ಬನಾರಸ್) ಹಿಂದೂ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಜಯನಂದದೇವನು ನೀಡಿಹ ದಾನಪತ್ರದ ಅನುವಾದಿತ ಪ್ರತಿಲಿಪಿ ತಾಮ್ರಪತ್ರವು ಮಠದಲ್ಲೇ ಸುರಕ್ಷಿತವಾಗಿದೆ.

ಈ ಮಠದಲ್ಲಿ ಹುಮಾಯೂ, ಅಕ್ಬರ್ , ಜಹಾಂಗೀರ್ , ಶಹಜಾನ್ , ಔರಂಗಜೇಬ್ ಮತ್ತು ಇನ್ನಿತರ ಮಹಮ್ಮದೀಯ ರಾಜರು ನೀಡಿರುವ ದಾನಪತ್ರಗಳೂ ಸಹ ಜೀರ್ಣಶೀರ್ಣಾವಸ್ಥೆಯಲ್ಲಿ ಜೀವಂತವಾಗಿವೆ. ಬನಾರಸ್ ಗಜೇಟಿಯರ್ನಲ್ಲಿ ಸಹ ಇದೇ ಈ ದಾನಪತ್ರಗಳ ಕುರಿತು ಅಲಹಾಬಾದ್ ಹೈಕೋರ್ಟ್ ಮತ್ತು ಜಿಲ್ಲಾ ಕೋರ್ಟ್ಗಳು ನೀಡಿರುವ ತೀರ್ಪಿನ ಉಲ್ಲೇಖವಿದೆ.

ಹಿಂದೂ ದ್ರೋಹಿಯೆಂದೇ ಪರಿಗಣಿಸಲ್ಪಡುವ ಔರಂಗಜೇಬನು ಕಾಶಿಯ ದೇವಸ್ಥಾನಗಳನ್ನು ಲೂಟಿ ಮಾಡಿ ಧ್ವಂಸಗೊಳಿಸುತ್ತ ಜಂಗಮವಾಡಿ ಮಠವನ್ನೂ ಪ್ರವೇಶಿಸಿದ್ದನಂತೆ. ಒಳಹೊಕ್ಕುತ್ತಲೇ ಯಾವುದೋ ಭೀಮಕಾಯ, ಕಾಳಿದೇವಛಾಯೆ ಅವನೆಡೆಗೆ ಉರಿವ ಕಣ್ಣುಗಳಿಂದ ನುಂಗಿ ಹಾಕುವಂತೆ ನೋಡಿತ್ತಂತೆ. ಸಾಮ್ರಾಜ್ಯ ಮತ್ತು ಸೈನ್ಯಬಲದ ನಡುವೆಯೂ ಸುಸಜ್ಜಿತ ಸಾಮ್ರಾಟ ಔರಂಗಜೇಬನು ಭಯದಿಂದ ಕಂಪಿಸಿದನು, ಕೆಲ ಕಾಲ ಹೊರಗೆ ಬಂದು ಮಠಧ್ವಂಸದ ವಿಚಾರವನ್ನು ತ್ಯಾಗಮಾಡಿ ಭೂಮಿದಾನಗೈದನು. ಅದರ ನೈಜಹಸ್ತಾಕ್ಷರಯುಕ್ತ ಪತ್ರವು ಇಂದಿಗೂ ಮಠದಲ್ಲಿ ಜೀವಂತವಾಗಿದೆ.

ಪಕ್ಕದ ನೇಪಾಳ ದೇಶದ ಭಕ್ತಪುರದಲ್ಲಿಯೂ ಇದೇ ಪೀಠದ ಶಾಖಾ ಮಠವೊಂದಿದೆ. ಅದೂ ಕೂಡ ಜಂಗಮವಾಡಿ ಮಠವೆಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಆ ಮಠಕ್ಕೂ ನೇಪಾಳದ ರಾಜನಾದ ವಿಶ್ವಮಲ್ಲನು ಶ್ರೀ ಮಲ್ಲಿಕಾರ್ಜುನ ಯತಿಗಳಿಗೆ ಭೂಮಿಯನ್ನು ದಾನವಾಗಿ ನೀಡಿದ್ದನು. ದಾನಪತ್ರವು ಇಂದಿಗೂ ಉಪಲಬ್ಧವಿದೆ. ವರ್ತಮಾನದಲ್ಲಿ ಗೃಹಸ್ಥ ಜಂಗಮ ಪರಂಪರೆಯನ್ನು ನೇಪಾಳದ ಮಠವು ಅನುಕರಿಸುತ್ತಿದೆ. ವರ್ತಮಾನದಲ್ಲಿ “ಶ್ರೀ ೧೦೦೮ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು” ೮೬ನೇ ಯತಿಗಳಾಗಿ ಪರಂಪರೆಯನ್ನು ಮುನ್ನಡೆಸುತ್ತಿದ್ದಾರೆ. ಇದೇ ಐದು ಪೀಠಗಳ ಜಗದ್ಗುರುಗಳನ್ನು ಪಂಚಾಚಾರ್ಯರೆಂದು ಸಂಬೋಧಿಸಲಾಗುತ್ತದೆ. ಕಲಿಯುಗದ ಆರಂಭದಲ್ಲಿ ರೇವಣಾರಾಧ್ಯ, ಮರುಳಾರಾಧ್ಯ, ಏಕೋರಾಮಾರಾಧ್ಯ, ಪಂಡಿತಾರಾಧ್ಯ ಮತ್ತು ವಿಶ್ವಾರಾಧ್ಯರಿಂದ ವೀರಶೈವ ಧರ್ಮವು ಸ್ಥಾಪನೆಗೊಂಡಿದೆ. ಈ ಪ್ರಾಚೀನ ಆಚಾರ್ಯರಿಂದ ಸ್ಥಾಪಿತವಾದ ಮಠಗಳಲ್ಲಿ ‘ವೀರಮಾಹೇಶ್ವರ(ಜಂಗಮ) ವಂಶೋತ್ಪನ್ನ ಬ್ರಹ್ಮಚಾರಿ ವಟುಗಳ ಪಟ್ಟಾಭಿಷೇಕವನ್ನು ನೆರವೇರಿಸಲಾಗುತ್ತದೆ. ಇವರೇ ವೀರಶೈವ ಧರ್ಮದ ಜಗದ್ಗುರುಗಳಾಗಿರುತ್ತಾರೆ. ಅಂತೆಯೇ ಈ ರೀತಿಯಾಗಿ ಪಂಚಾಚಾರ್ಯ ಪರಂಪರೆಯು ಅನಾದಿ ಕಾಲದಿಂದಲೂ ಜೀವಂತವಾಗಿದೆ.

ವಿಷಯ ಸಂಗ್ರಹಣೆ –

೧. ವೀರಶೈವ ಅಷ್ಟಾವರಣ ವಿಜ್ಞಾನ

೨. ಶಕ್ತಿವಿಶಿಷ್ಟಾದ್ವೈತ ತತ್ವತ್ರಯವಿಮರ್ಶೆ

Someshwar Gurumath

Someshwar Gurumath is an author, filmmaker, poet, songwriter, and public speaker from Hubli, Karnataka. He has a BSc in Visual Media and is currently pursuing PG Diploma in Public leadership at the Rashtram School of Public Leadership, Rishihood University. He has published two books so far, titled Nanu Nanna Jagattu and Payanigana Kavyagalu, both of which are anthologies of his poems. Through his writings and filmmaking, he aspires to bring about a unified cultural consciousness and motivate people to work towards the renaissance of Bhārata.

0 Reviews

Related post