“ಏಕಂ ಸತ್ ವಿಪ್ರಾ, ಬಹುಧಾ ವದಂತಿ”

 “ಏಕಂ ಸತ್ ವಿಪ್ರಾ, ಬಹುಧಾ ವದಂತಿ”

ಮೊಟ್ಟ ಮೊದಲಿಗೆ ಸ್ವಾಮೀ ವಿವೇಕಾನಂದರ ಈ ಉಪನ್ಯಾಸದತ್ತ ಒಮ್ಮೆ ಕಣ್ಣು ಹಾಯಿಸೋಣ –  

ವಿಷಯ; ಭಾರತೀಯ ಜನಜೀವನದಲ್ಲಿ ವೇದಾಂತದ ಅನುಷ್ಠಾನ.

ಮೊದಲಿಗೆ ಸ್ವಾಮೀಜಿ ಹಿಂದೂ ಎಂಬ ಶಬ್ದದ ವ್ಯುತ್ಪತ್ತಿಯನ್ನು ವಿವರಿಸಿದರು. ಸಿಂಧೂ ನದಿಯ ಬಲಭಾಗದಲ್ಲಿದ್ದವರನ್ನೆಲ್ಲ ಪುರಾತನ ಪರ್ಷಿಯನ್ನರು ಹಿಂದೂಗಳು ಎಂದರು. ಗ್ರೀಕರು ಈ ಹಿಂದೂಗಳನ್ನು ಇಂಡಿಯಾದವರು ಎಂದು ಕರೆದರು. ಆದ್ದರಿಂದ ಹಿಂದೂ ಎಂಬ ಶಬ್ದಕ್ಕೆ ಈಗ ಯಾವುದೇ ಅರ್ಥವಿಲ್ಲ ಎಂದರು ಸ್ವಾಮೀಜಿ. ಆದರೆ ಆ ಪದವು ಬಳಕೆಗೆ ಬಂದಾಗಿರುವುದರಿಂದ ಅದನ್ನೇನೂ ಈಗ ತಿರಸ್ಕರಿಸಬೇಕಾಗಿಲ್ಲ ಎಂದು ಸ್ಪಷ್ಟ ಪಡಿಸಿದರು. ಬಳಿಕ ಹಿಂದೂಧರ್ಮದ ಲಕ್ಷಣಗಳನ್ನು ವಿವರಿಸುತ್ತಾ ಹೇಳಿದರು. ನಿಜ ಹೇಳಬೇಕೆಂದರೆ ಹಿಂದೂಧರ್ಮ ಎಂಬುದು ಹಲವಾರು ಧರ್ಮಗಳ ಹಲವಾರು ಭಾವನೆಗಳ, ಹಲವಾರು ತತ್ತ್ವಶಾಸ್ತ್ರ ,ಸಂಪ್ರದಾಯ, ಆಚರಣೆಗಳ ಸಮ್ಮಿಶ್ರಣ. ಇವೆಲ್ಲಕ್ಕೂ ಸಾಮಾನ್ಯವಾದ ಯಾವುದೇ ಒಂದು ಧಾರ್ಮಿಕ ಚೌಕಟ್ಟು, ಆಡಧಿಪತ್ಯ ಇಲ್ಲ. ಆದರೆ ಇವೆಲ್ಲವೂ ಅಧೀನವಾಗಿರುವುದು ವೇದಗಳ‌ ಜ್ಞಾನಕಾಂಡಕ್ಕೆ. ಈ ಎಲ್ಲ ವಿಭಿನ್ನ ಮತಗಳೂ ಉಪನಿಷತ್ತುಗಳು ಹಾಗೂ ವೇದಾಂತವನ್ನೊಳಗೊಂಡ ಜ್ಞಾನಕಾಂಡವೇ ತಮ್ಮ ಅತ್ಯುನ್ನತ ಪ್ರಮಾಣವೆಂದು ಅಂಗೀಕರಿಸುತ್ತವೆ.

ವೇದಾಂತವೆಂದರೆ ಅದ್ವೈತ ಮಾತ್ರವೇ ಎಂದು ಬಹಳ ಜನ ತಿಳಿದಿದ್ದಾರಾದರೂ ಅದು ನಿಜವಲ್ಲ.

ದ್ವೈತ, ವಿಶಿಷ್ಟಾದ್ವೈತ, ಅದ್ವೈತಗಳೆಲ್ಲಕ್ಕೂ ವೇದಾಂತವೇ ಪ್ರಮಾಣ….ಅಷ್ಟೇ ಅಲ್ಲ.

ನಮ್ಮ ಶಾಸ್ತ್ರ ಗ್ರಂಥಗಳಲ್ಲಿ ದ್ವೈತ ಅದ್ವೈತಗಳೆರಡಕ್ಕೂ ಸೂಕ್ತ ಸ್ಥಾನವಿದೆ.

ಕಟ್ಟಾ ಅದ್ವೈತಿಯಾಗಿದ್ದರೂ  ಅಷ್ಟೇ ನಿಷ್ಠಾವಂತ ದ್ವೈತಿಯಾಗಿದ್ದ ,ಎಷ್ಟು ಜ್ಞಾನಿಯೋ ಅಷ್ಟೇ ದೊಡ್ಡ ಭಕ್ತನೂ ಆಗಿದ್ದ ದೇವಮಾನವನೊಬ್ಬನ ಸಂಪರ್ಕಕ್ಕೆ ಬರುವ ಸೌಭಾಗ್ಯ ನನ್ನದಾಗಿತ್ತು . ಈತನ ಸಹವಾಸ ಮಾಡಿದ ನಾನು, ಹಿಂದಿನ ಭಾಷ್ಯಕಾರರ ಟೀಕೆ ಟಿಪ್ಪಣಿಗಳನ್ನು ಕುರುಡಾಗಿ ಓದಿಕೊಳ್ಳಲಿಲ್ಲ.ಬದಲಾಗಿ ಉಪನಿಷತ್ತುಗಳನ್ನು ಸ್ವತಂತ್ರವಾಗಿ ಇನ್ನೂ ಉತ್ತಮ ವಿಧಾನದಲ್ಲಿ ಅಧ್ಯಯನ ಮಾಡಿದೆ. ನನ್ನ ಈ ಸಂಶೋಧನೆಯ ಫಲವಾಗಿ ನಾನು ತಳೆದ ಅಭಿಪ್ರಾಯವೇನೆಂದರೆ ಈ ಎಲ್ಲ ಶಾಸ್ತ್ರಗಳಲ್ಲಿ ಪರಸ್ಪರ ವ್ಯತಿರಿಕ್ತತೆಯಾಗಲಿ ಅಸಂಬದ್ಧತೆಗಳಾಗಲಿ ಇಲ್ಲ ಎಂಬುದು ….. ಬದಲಾಗಿ ಅವು ಒಂದಕ್ಕೊಂದು ಅತ್ಯಂತ ಸುಂದರವಾಗಿ ಅದ್ಭುತವಾಗಿ ಹೊಂದಿಕೊಂಡಿವೆ. ಒಂದರಿಂದ ಇನ್ನೊಂದು ಸಹಜವಾಗಿ ತರ್ಕಬದ್ಧವಾಗಿ ಮೂಡುತ್ತದೆ.

ಒಂದು ಭಾವ ಮತ್ತೊಂದು ಭಾವಕ್ಕೆ ಕರೆದೊಯ್ಯುತ್ತದೆ.  

ನೀವು ಸುಧಾರಣೆಯ ಬಗ್ಗೆ ಮಾತನಾಡುತ್ತೀರಿ,( ಭಾರತೀಯರನ್ನುದ್ದೇಶಿಸಿ )  ಕಳೆದ ನೂರು ವರ್ಷಗಳಿಂದಲೂ ಮಾತನಾಡುತ್ತಲೇ ಇದ್ದೀರಿ. ಆದರೆ ಅನುಷ್ಠಾನದ ಪ್ರಶ್ನೆ ಬಂದಾಗ ಮಾತ್ರ ಅದರ ಸುಳಿವೇ ಕಾಣುವುದಿಲ್ಲ. ಅದಕ್ಕೆ ಕಾರಣವೇನು? ಕಾರಣ ಒಂದೇ,

ನೀವು ದುರ್ಬಲರು, ನಿಮ್ಮ ದೇಹ,ಮನಸ್ಸು ದುರ್ಬಲ,ಮತ್ತು ನಿಮ್ಮಲ್ಲಿ ನಿಮಗೆ ಶ್ರದ್ಧೆಯಿಲ್ಲ.

ಶಕ್ತಿ…. ಶಕ್ತಿಯೇ ನಮಗಿಂದು ಬೇಕಾಗಿರುವುದು.

ಆದರೆ ಆ ಶಕ್ತಿಯನ್ನು ನೀಡಬಲ್ಲವರಾರು?

ನಿಮಗೆ ಆ ಶಕ್ತಿ ಎಲ್ಲಿ ದೊರೆತೀತು? ಉಪನಿಷತ್ತುಗಳಲ್ಲಿ !…..

ಉಪನಿಷತ್ತುಗಳ ಪುಟಪುಟದಲ್ಲೂ ಶಕ್ತಿಯೇ ಎದ್ದು ಕಾಣುತ್ತದೆ. ನಾನು ಕಲಿತ ಅತಿ ದೊಡ್ಡ ಪಾಠವೇ ಇದು. ಓ ಮಾನವ ಶಕ್ತಿವಂತನಾಗು,ದೌರ್ಬಲ್ಯವನ್ನು ತೊರೆ!  ಇದೇ ಉಪನಿಷತ್ತು ಘೋಷಿಸುವ ಮಹಾವಾಣಿ. ಮಾನವನಲ್ಲಿ ಸಹಜವಾಗಿಯೇ ದೌರ್ಬಲ್ಯವಿಲ್ಲವೇ ?

ಹೌದು, ಇದೆ.

ಆದರೆ ಆ ದೌರ್ಬಲ್ಯವನ್ನು ದೌರ್ಬಲ್ಯ ಕಳೆಯಬಲ್ಲುದೆ ? ಕೆಸರಿನಿಂದ ಕೆಸರನ್ನು ತೊಳೆಯಬಹುದೆ? ಪಾಪವು ಪಾಪವನ್ನು ತೊಡೆಯಬಲ್ಲುದೆ?

ಇಲ್ಲ,

*ಓ ಮಾನವ, ಮೇಲೇಳು, ಶಕ್ತಿಶಾಲಿಯಾಗು!

ಎಂದು ಮೊಳಗುತ್ತದೆ ಉಪನಿಷತ್ತು.*

ಅಭೀಃ ಅಭೀಃ, ನಿರ್ಭಯ,ನಿರ್ಭಯ ಎಂಬ ಶಬ್ದವನ್ನು ಮತ್ತೆ ಮತ್ತೆ ಬಳಸುವ ಗ್ರಂಥ ಈ

ಜಗತ್ತಿನಲ್ಲಿ ಅದೊಂದೇ…..

ಒಬ್ಬ ಬೆಸ್ತರವನು ತನ್ನನ್ನು ತಾನು ಆತ್ಮನೆಂದು ಭಾವಿಸಿದರೆ ಅವನು ಇನ್ನೂ ಉತ್ತಮ ಬೆಸ್ತನಾಗುತ್ತಾನೆ,

ಒಬ್ಬ ವಿದ್ಯಾರ್ಥಿಯು ತನ್ನನ್ನು ಆತ್ಮನೆಂದರಿತರೆ ಅವನು ಇನ್ನೂ ಉತ್ತಮ ವಿದ್ಯಾರ್ಥಿಯಾಗುತ್ತಾನೆ……

ಇದೇ ಮಾತು ಇತರ ವೃತ್ತಿಯವರಿಗೂ ಅನ್ವಯಿಸುತ್ತದೆ.

ಜಾತಿಯು ಪ್ರಕೃತಿ ವಿಹಿತ ಪದ್ಧತಿ……..

ಸಮಾಜದಲ್ಲಿ ಒಬ್ಬೊಬ್ಬರು ಒಂದೊಂದು ವೃತ್ತಿಯನ್ನು ಮಾಡುತ್ತಿರಬಹುದು. ಹಾಗೆಂದ ಮಾತ್ರಕ್ಕೆ ನೀವು ನನಗಿಂತ ಶ್ರೇಷ್ಠರೆಂದೇನೂ ಆಗಲಿಲ್ಲ. ಅಲ್ಲದಿದ್ದರೆ ನೀವು ಜೋಡು ರಿಪೇರಿ ಮಾಡಿ ನೋಡೋಣ! ಅಥವಾ ನಾನಾದರೂ ರಾಜ್ಯವಾಳಬಲ್ಲೆನೆ?

ನಾನು ಜೋಡು ಹೊಲಿಯುವುದರಲ್ಲಿ ಜಾಣ, ನೀವು ವೇದವನ್ನೋದುವುದರಲ್ಲಿ ಜಾಣರು.

ಆದರೆ ನೀವು ನನ್ನ ತಲೆಯ ಮೇಲೆ ಹತ್ತಿ ತುಳಿಯಲು ಅದು ಕಾರಣವಾಗಬೇಕಿಲ್ಲ.

ಸಮಸ್ತ ಸ್ತ್ರೀ ಪುರುಷರನ್ನೂ ದೇವರೆಂದೇ ನೋಡಿ.  

ನೀವು ಯಾರಿಗೂ ಸಹಾಯ ಮಾಡಲಾರಿರಿ.

ಆದರೆ ಸೇವೆ ಮಾಡಬಲ್ಲಿರಿ.  

ನಿಮಗೆ ಅಂತಹ ಭಾಗ್ಯವಿದ್ದರೆ ಭಗವಂತನ ಮಕ್ಕಳ ಸೇವೆ ಮಾಡಿ.

ತನ್ಮೂಲಕ ಸಾಕ್ಷಾತ್ ಭಗವಂತನ ಸೇವೆಯನ್ನೇ ಮಾಡಿ.  ತನ್ನ ಮಕ್ಕಳಲ್ಲಿ ಯಾರಾದರೊಬ್ಬರ ಸೇವೆ ಮಾಡುವ ಅವಕಾಶವನ್ನು ಭಗವಂತ ನಿಮಗೆ ಕರುಣಿಸಿದ್ದೇ ಆದರೆ ನೀವು ಧನ್ಯರೇ ಸರಿ. ……

ಆದ್ದರಿಂದ ಇತರರ ಸೇವೆಯನ್ನು ಭಗವಂತನ ಪೂಜೆಯೆಂದು ಭಾವಿಸಿರಿ. ದರಿದ್ರರಲ್ಲಿ ಭಗವಂತನನ್ನು ಕಾಣಬೇಕು. ನಾವು ಅವರ ಸೇವೆ ಮಾಡುವುದಾದರೆ ಅದರಿಂದ ನಮಗೇ ಮುಕ್ತಿ.

ನಾವು ಆತನ ಸೇವೆ ಮಾಡಿ ಉದ್ಧಾರವಾಗಲೆಂದು ಭಗವಂತನೇ ಕುಷ್ಠರೋಗಿಯಾಗಿ,

ಮೂರ್ಖನಾಗಿ, ಪಾಪಿಯಾಗಿ ಬರುತ್ತಾನೆ! ನನ್ನ ಈ ಮಾತುಗಳು ಎದೆಗಾರಿಕೆಯ ಮಾತುಗಳು.

ನಿಜ, ಅದನ್ನೇ ಮತ್ತೊಮ್ಮೆ ಎದೆ ತಟ್ಟಿ ಹೇಳುತ್ತೇನೆ…..

ಈ ಲೋಕಕ್ಕೆ ಬೇಕಾದ ಬೆಳಕನ್ನೆಲ್ಲ ತನ್ನಿ.

ಎಲ್ಲರಿಗೂ ಬೆಳಕು ದೊರಕಲಿ. ಪ್ರತಿಯೊಬ್ಬನೂ ಮುಕ್ತನಾಗುವವರೆಗೂ ನಮ್ಮ ಕರ್ತವ್ಯ ಮುಗಿಯದು. ಬಡವರಿಗೆ ಬೆಳಕು ಕೊಡಿ, ಶ್ರೀಮಂತರಿಗೆ ಹೆಚ್ಚು ಬೆಳಕು ಕೊಡಿ.

ಏಕೆಂದರೆ ಬೆಳಕಿನ ಅವಶ್ಯಕತೆಯು ಬಡವರಿಗಿಂತ ಶ್ರೀಮಂತರಿಗೆ ಹೆಚ್ಚು .

ಅವಿದ್ಯಾವಂತರಿಗೆ ಬೆಳಕು ಕೊಡಿ.

ವಿದ್ಯಾವಂತರಿಗೆ ಹೆಚ್ಚು ಬೆಳಕು ಕೊಡಿ.

ಏಕೆಂದರೆ ಈಗಿನ ವಿದ್ಯಾಭ್ಯಾಸ ಬಹುಮಟ್ಟಿಗೆ ನಿರರ್ಥಕವಾದದ್ದು, ನೀರಸವಾದದ್ದು.

ಆದ್ದರಿಂದ ಎಲ್ಲರಿಗೂ ಬೆಳಕು ತೋರಿ.

ಉಳಿದುದನ್ನು ದೇವರಿಗೆ ಬಿಡಿ.

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ .ನಿನಗೆ ಕರ್ಮ ಮಾಡಲು ಅಧಿಕಾರ, ಫಲಕ್ಕಲ್ಲ.  

ಇದು ಭಗವಂತನ ವಾಣಿ.

“ಏಕಂ ಸತ್ ವಿಪ್ರಾ ಬಹುಧಾ ವದಂತಿ” ಎನ್ನುವುದು ಉಪನಿಷತ್ತುಗಳಲ್ಲಿ ಹೆಚ್ಚಾಗಿ ಉಲ್ಲೇಖವಾಗಿರುವ ಸೂತ್ರ. ಇದರರ್ಥ ‘ಅಸ್ತಿತ್ವದಲ್ಲಿರುವ ಪರಮ ಸತ್ಯವೊಂದೇ, ಆದರೆ ವಿವಿಧ ಹೆಸರುಗಳಿಂದ ಋಷಿಮುನಿಗಳು ಅದನ್ನು ಸಂಬೋಧಿಸಿದರು’. ಪ್ರಾಸ್ತವಿಕವಾಗಿ ಭಾರತೀಯ ದರ್ಶನ ಪರಂಪರೆಯನ್ನೊಮ್ಮೆ ಗಮನಿಸಿದ್ದೇ  ಆದಲ್ಲಿ ಅವುಗಳ ಮೂಲ ವೇದಾಗಮಗಳಲ್ಲೇ ಇರುವುದು ನಿಶ್ಚಿತವಾಗುತ್ತದೆ. ವೇದಗಳು ಶಿವನ ಉಸಿರಿನಂತೆಯೂ ಮತ್ತು ಆಗಮಗಳು ಅವನ ಮಾತಿನ ರೂಪದಂತೆಯೂ ಅಸ್ತಿತ್ವದಲ್ಲಿರುವ ಸಂಗತಿಯನ್ನು ದಾರ್ಶನಿಕರು ಸಮ್ಮತಿಸುತ್ತಾರೆ. “ದೃಶ್ಯತೇ ಸಾಕ್ಷಾತ್ ಕ್ರಿಯತೇ ಪರಮತತ್ವಂ ಯೇನ ತದ್ ದರ್ಶನಂ” ಎಂಬ ವ್ಯುತ್ಪತ್ತಿಯಿಂದ  ತತ್ವಜ್ಞಾನವನ್ನು ಗಳಿಸಲು ಮೂಲ ಸಾಧನವಾದ ಶಾಸ್ತ್ರವನ್ನು ದರ್ಶನವೆಂದು ಸಂಬೋಧಿಸಲಾಗಿದೆ. ತತ್ವಜ್ಞಾನ ಪ್ರತಿಪಾದನೆಯಲ್ಲಿ ಭಾರತೀಯ ದಾರ್ಶನಿಕ ಪರಂಪರೆಯನ್ನು ಉಪನಿಷದ್ ಆಧಾರವಾದವುಗಳು ಮತ್ತು ಆಗಮಾಧಾರಿತವಾದವುಗಳು ಎಂದು ಎರಡು ವಿಭಾಗ ಮಾಡಲಾಗಿದೆ. ವೇದಾಂತವನ್ನು ಉಪನಿಷತ್ತುಗಳು ಪ್ರತಿಪಾದಿಸಿದರೆ ಸಾಂಪ್ರದಾಯಿಕ ಪರಂಪರೆಗಳಾದ ಶೈವ, ವೈಷ್ಣವ ಮತ್ತು ಶಾಕ್ತ ವಿಭಾಗಗಳನ್ನು ಆಗಮಗಳು ಪ್ರತಿಪಾದಿಸುತ್ತವೆ. ಭಾರತೀಯ ನೆಲದಲ್ಲಿ ಹುಟ್ಟಿದ ಯಾವುದೇ ಪರಂಪರೆಯನ್ನು ಅತಿ ಸೂಕ್ಶ್ಮವಾಗಿ ಅವಲೋಕಿಸಿದ್ದೇ ಆದಲ್ಲಿ ಒಂದಲ್ಲ ಒಂದು ರೂಪದಲ್ಲಿ ”ಪರಮತತ್ವವನ್ನು” ಪಡೆಯುವ ಅಥವಾ ಸತ್ಯಾನ್ವೇಷಣೆಯ ಜಿಜ್ಞಾಸೆಯನ್ನು ಜನಮಾನಸದಲ್ಲಿ ಮೂಡಿಸುವ ಪ್ರಯತ್ನವನ್ನು ಮಾಡಿವೆ. ಹೀಗಾಗಿ ಹರಿವ ನದಿಗಳೆಲ್ಲವೂ ಮರಳಿ ಸಾಗರವನ್ನೇ ಸೇರುವಂತೆ ವೇದಾಗಮಗಳಿಂದ ಜನ್ಮ ಪಡೆದಿರುವ ಸಂಪ್ರದಾಯಗಳು ಸಹ ಆ ಪರಮತತ್ವವನ್ನು ಸೇರುವಲ್ಲಿ ನೆರವಾಗುತ್ತವೆ. ಆದ್ದರಿಂದಲೇ ಸಂಪ್ರದಾಯಗಳ ಭಿನ್ನತೆಯಿದ್ದರೂ ಕೂಡ ಮಗದೊಂದು ಸಂಪ್ರದಾಯವನ್ನು ತತ್ವಜಿಜ್ಞಾಸುವಿನ ರೂಪದಲ್ಲಿ ಕಾಣುತ್ತಾ ವೈವಿಧ್ಯದ ಆಗರವನ್ನು ಆಲಂಗಿಸಿ ಸನಾತನ ಹಿಂದೂ ಧರ್ಮ  “ಏಕಂ ಸತ್ ವಿಪ್ರಾ ಬಹುಧಾ ವದಂತಿ” ಯನ್ನು ಪರಿಪಾಲಿಸಿಕೊಂಡು ಬಂದಿದೆ.

ಸೋಮೇಶ್ವರ ಗುರುಮಠ

– ವಿಷಯ ಸಂಗ್ರಹಣೆ

೧.ವಿಶ್ವಮಾನವ ವಿವೇಕಾನಂದ – ಸ್ವಾಮಿ ಪುರುಷೋತ್ತಮಾನಂದಜಿ

೨.ಶಕ್ತಿವಿಶಿಷ್ಟಾದ್ವೈತ ತತ್ವತ್ರಯ ವಿಮರ್ಶೆ -ಡಾ||ಸಿ . ಶಿವಕುಮಾರಸ್ವಾಮಿ

Someshwar Gurumath

Someshwar Gurumath is an author, filmmaker, poet, songwriter, and public speaker from Hubli, Karnataka. He has a BSc in Visual Media and is currently pursuing PG Diploma in Public leadership at the Rashtram School of Public Leadership, Rishihood University. He has published two books so far, titled Nanu Nanna Jagattu and Payanigana Kavyagalu, both of which are anthologies of his poems. Through his writings and filmmaking, he aspires to bring about a unified cultural consciousness and motivate people to work towards the renaissance of Bhārata.

0 Reviews

Related post